8 ಮಂದಿ ಭಾರತೀಯರಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ರದ್ದುಪಡಿಸಿದ ಕತಾರ್

ಕತಾರ್ ನಲ್ಲಿ ಗೂಢಚರ್ಯೆಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಸಿಬ್ಬಂದಿಗಳ ಮರಣದಂಡನೆಯನ್ನು ಕತಾರ್ ಮೇಲ್ಮನವಿ ನ್ಯಾಯಾಲಯವು ರದ್ದುಗೊಳಿಸಿದ್ದು, ಮರಣದಂಡನೆಯನ್ನು ಜೈಲು ಶಿಕ್ಷೆಗೆ ಪರಿವರ್ತಿಸಿದೆ.

ಅಕ್ಟೋಬರ್‌ನಲ್ಲಿ ಕತಾರ್ ನ್ಯಾಯಾಲಯವು 8 ಭಾರತೀಯ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿತ್ತು. ಇದರ ಬೆನ್ನಲ್ಲೇ ಭಾರತ ನವೆಂಬರ್‌ನಲ್ಲಿ ಈ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಿತ್ತು.

8 ಮಾಜಿ ಭಾರತೀಯ ನೌಕಾ ಅಧಿಕಾರಿಗಳ ಮರಣದಂಡನೆಯನ್ನು ಜೈಲು ಶಿಕ್ಷೆಗೆ ಪರಿವರ್ತಿಸಿದ ಕತಾರ್ನ ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ವಾಗತಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯ, ಮೇಲ್ಮನವಿ ನ್ಯಾಯಾಲಯದ ವಿವರವಾದ ತೀರ್ಪು ಬಿಡುಗಡೆಯಾಗಬೇಕಿದೆ. ಮುಂದಿನ ನಡೆಯ ಬಗ್ಗೆ ನಿರ್ಧರಿಸಲು ಕಾನೂನು ತಂಡ ಮತ್ತು ಆರೋಪಿಗಳ ಕುಟುಂಬದ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಕತಾರ್ನಲ್ಲಿರುವ ನಮ್ಮ ರಾಯಭಾರಿ ಮತ್ತು ಇತರ ಅಧಿಕಾರಿಗಳು ಇಂದು ಮೇಲ್ಮನವಿ ನ್ಯಾಯಾಲಯಕ್ಕೆ ಕುಟುಂಬದ ಸದಸ್ಯರೊಂದಿಗೆ ಹಾಜರಿದ್ದರು. ಈ ವಿಷಯದ ಆರಂಭದಿಂದಲೂ ನಾವು ಅಧಿಕಾರಿಗಳ ಕುಟುಂಬಕ್ಕೆ ಬೆಂಬಲಕ್ಕೆ ನಿಂತಿದ್ದೇವೆ ಮತ್ತು ಕಾನೂನು ನೆರವು ನೀಡುವುದನ್ನು ಮುಂದುವರಿಸಿದ್ದೇವೆ. ನಾವು ಕತಾರ್ ಸರಕಾರದ ಜೊತೆ ಕೂಡ ಈ ವಿಷಯದ ಬಗ್ಗೆ ಮಾತುಕತೆ ನಡೆಸುತ್ತೇವೆ. ಪ್ರಕರಣದ ಸೂಕ್ಷ್ಮತೆ ಗಮನಿಸಿ ಈ ಹಂತದಲ್ಲಿ ಯಾವುದೇ ಹೆಚ್ಚಿನ ಕಾಮೆಂಟ್ ಮಾಡುವುದು ಸೂಕ್ತವಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಕತಾರ್ ಬ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ತರಬೇತಿ ನೀಡುವ ಖಾಸಗಿ ಸಂಸ್ಥೆಯಾದ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್‌ಗಾಗಿ ಕೆಲಸ ಮಾಡುತ್ತಿದ್ದ 8 ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಕತಾರ್ ಪೊಲೀಸರು ಬಂಧಿಸಿದ್ದರು.

ಟಾಪ್ ನ್ಯೂಸ್