ಪುತ್ತೂರು;ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಿಜೆಪಿ ನಾಯಕರ ಫೋಟೋಗಳನ್ನು ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು ಚಪ್ಪಲಿ ಹಾರ ಹಾಕಿರುವ ಬ್ಯಾನರ್ ಆಳವಡಿಕೆಗೆ ಸಂಬಂಧಿಸಿ ಮತ್ತೆ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ನರಿಮೊಗರು ಸಮೀಪದ ವಿಶ್ವನಾಥ್ ಮತ್ತು ಮಾಧವ ಎಂಬವರನ್ನು ನಿನ್ನೆ ಬಂಧಿಸಲಾಗಿತ್ತು.ಇವರನ್ನು ವಿಚಾರಣೆ ನಡೆಸಿದಾಗ ಇನ್ನೂ ಹಲವರಿದ್ದರು ಎಂಬ ಮಾಹಿತಿ ಮೇರೆಗೆ ಪತ್ತೆ ಕಾರ್ಯ ನಡೆಸಿದ ಪೊಲೀಸರು ತಡ ರಾತ್ರಿ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು.ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಬಿಜೆಪಿ ನಾಯಕರಾಗಿರುವ ಮಾಜಿ ಸಿಎಂ ಸದಾನಂದ ಗೌಡ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರ ಭಾವಚಿತ್ರ ಬ್ಯಾನರ್ ನಲ್ಲಿ ಇತ್ತು.
ಬ್ಯಾನರ್ ನಲ್ಲಿ ‘ಭಾವಪೂರ್ಣ ಶ್ರದ್ಧಾಂಜಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ. ನೊಂದ ಹಿಂದೂ ಕಾರ್ಯಕರ್ತರು’ ಎಂದು ಬರೆಯಲಾಗಿದೆ.ಅಷ್ಟೇ ಅಲ್ಲದೇ ಈ ಬ್ಯಾನರ್ ಗೆ ಚಪ್ಪಲಿ ಹಾರವನ್ನು ಹಾಕಲಾಗಿತ್ತು.
ಈ ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ವೈರಲ್ ಬೆನ್ನಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆಯ ಆರೋಪಿಗಳ ಬಂಧನದ ಬೆನ್ನಲ್ಲೇ ತಡರಾತ್ರಿ ಡಿವೈಎಸ್ಪಿ ಕಚೇರಿಗೆ ಅರುಣ್ ಕುಮಾರ್ ಪುತ್ತಿಲ ಅವರು ಭೇಟಿ ನೀಡಿ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ.