ಬಸ್ಸಿಗೆ ಬೆಂಕಿ ಹಾಕುತ್ತೇನೆ, ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆ ಎಂದ ಪುನೀತ್ ಕೆರೆಹಳ್ಳಿ

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿ, ಬಸ್ಸಿಗೆ ಬೆಂಕಿ ಹಾಕುತ್ತೇನೆ, ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆ ಎಂದು ಹೇಳುವ ವಿಡಿಯೋ ವೈರಲ್‌ ಆಗಿದೆ.

ಈ ಬಗ್ಗೆ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದೆ.

ರಾಜ್ಯ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮತ್ತು ಸಂಗಡಿಗರ ಜೊತೆ ಮಾತನಾಡಿದ ಪುನೀತ್, ನಾನು ನಿಮಗೆ ನಿಮ್ಮ ತಮ್ಮನಾಗಿ ಬೇಕು ಅಂದ್ರೆ, ಕಾಂಗ್ರೆಸ್ ಸರಕಾರದ ಯಾವುದಾದರೂ ಪ್ರತಿನಿಧಿ ನನ್ನನ್ನು ಭೇಟಿಯಾಗಿ, ನನ್ನ ಮನವಿಯನ್ನು ಸೀಕರಿಸಬೇಕು. ಅವರು ಬರದೇ ಇದ್ದರೆ ಬಸ್ಸಿಗೆ ಬೆಂಕಿ ಹಾಕುವ, ಪೊಲೀಸರನ್ನು ಜಾಗ ಬಿಡಲಿಕ್ಕೆ ಹೇಳಿ, ನಾನು ಹೋಗ್ತೇನೆ. ನನ್ನನ್ನು ಇಲ್ಲಿಂದ ಬಿಡುಗಡೆಗೊಳಿಸಿದರೆ ಮತ್ತೆ ಸತ್ಯಾಗ್ರಹ ಏಕೆ ಮಾಡಲಿ? ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆ ಎಂದು ಹೇಳಿದ್ದಾನೆ.

ಹಿಂದೂ ಸಮಾಜದ ನಾಯಕನೆಂದು ಹೇಳಿಕೊಳ್ಳುವ ಪುನೀತ್ ಕೆರೆಹಳ್ಳಿ, ಈಗಾಗಲೇ ಅನೇಕ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಈತ ಈಗ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾನೆ. ಈತನಿಗೆ ಅನೇಕ ಹಿಂದುತ್ವ ಸಂಘಟನೆಗಳ ನಾಯಕರು ಹಾಗೂ ಬಿಜೆಪಿ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈತ ಅವರ ಮುಂದೆ ಬಹಿರಂಗವಾಗಿ ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆ ಹಾಗೂ ಬಸ್ಸಿಗೆ ಬೆಂಕಿ ಹಚ್ಚುತ್ತೇನೆ ಎಂದು ಕಾನೂನು ಸುವ್ಯವಸ್ಥೆಗೆ ಬಹಿರಂಗ ಸವಾಲು ಹಾಕಿರುವ ಹಿನ್ನೆಲೆಯಲ್ಲಿ ಕೂಡಲೇ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಟಾಪ್ ನ್ಯೂಸ್