ಪಿಎಸ್ ಐಯ ರಿವಾಲ್ವರ್ ಕಸಿದುಕೊಂಡು ಪರಾರಿಯಾಗಿ ಮರವೇರಿ ಕುಳಿತ ಕಳ್ಳ; ಜಿಗಿದು ರಿವಾಲ್ವರ್ ಕಸಿದುಕೊಂಡ ಎಸ್‌ಪಿ ಇಶಾಪಂತ್‌

ಕಲಬುರ್ಗಿ; ಪಿಎಸ್‌ಐಯ ಸರ್ವಿಸ್ ರಿವಾಲ್ವರ್‌ ಕಸಿದುಕೊಂಡು ಕಳ್ಳನೊಬ್ಬ ಪರಾರಿಯಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ನಡೆದಿತ್ತು.

ಅಫಜಲಪುರದ ಪಿಎಸ್‌ಐ ಭೀಮರಾಯ್ ಬಂಕಲಿ ಅವರ ರಿವಾಲ್ವರ್‌ ಕಿತ್ತುಕೊಂಡು ಖಾಜಾ ಗಾಯಕವಾಡ ಎಂಬಾತ ಓಡಿಹೋಗಿದ್ದ.

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಖಾಜಾಪ್ಪ ಗಾಯಕವಾಡನನ್ನು ಬಂಧಿಸಲು ಬೆಂಗಳೂರಿನಿಂದ ಅಫಜಲಪುರಕ್ಕೆ ಸಿಸಿಬಿ ಪೊಲೀಸರು ಆಗಮಿಸಿದ್ದರು. ಡಸ್ಟರ್ ವಾಹನದಲ್ಲಿ ಖಾಜಾ ಕುಳಿತಿದ್ದ. ಇದರ ಮಾಹಿತಿ ಪಡೆದು ಪಿಎಸ್‌ಐ ಭೀಮರಾಯ್‌ ತಮ್ಮ ಸರ್ವಿಸ್ ಪಿಸ್ತೂಲ್‌ನಿಂದ ಕಾರಿನ ಗ್ಲಾಸ್ ಒಡೆಯಲು ಮುಂದಾಗಿದ್ದರು. ಇದರಿಂದ ಖಾಜಾ ಏಕಾಏಕಿ ಸರ್ವಿಸ್‌ ರಿವಾಲ್ವರ್‌ ಕಸಿದು ಪರಾರಿಯಾಗಿದ್ದ.ಪೊಲೀಸರಿಂದ ತಪ್ಪಿಸಿಕೊಳ್ಳಲು ಬೃಹತ್ ಮರ ಏರಿ ಕುಳಿತಿದ್ದ.

ಅಫಜಲಪುರದಿಂದ ಸುಮಾರು 6 ಕಿ.ಮೀವರೆಗೂ ಓಡಿ ಖಾಜಪ್ಪ, ಬಳೂರ್ಗಿ ಗ್ರಾಮದ ಮಧ್ಯದಲ್ಲಿರುವ ಮರ ಏರಿ ಕುಳಿತಿದ್ದ.ಆತನ ಕೈಯಲ್ಲಿ ಪುಲ್ ಲೋಡೆಡ್ ಸರ್ವಿಸ್‌ ರಿವಾಲ್ವರ್‌ ಇದ್ದರಿಂದ ಪೊಲೀಸರಿಗೆ ಆತಂಕ ಹೆಚ್ಚಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್‌ಪಿ ಇಶಾಪಂತ್ ಭೇಟಿ ನೀಡಿದ್ದರು. ಖಾಜಾಪ್ಪ ಮನವೊಲಿಸಲು ನಾನಾ ರೀತಿಯ ಕಸರತ್ತು ಮಾಡಿದರು. ಇದ್ಯಾವುದಕ್ಕೂ ಜಗ್ಗದೆ ಇದ್ದಾಗ ಆರೋಪಿಯ ತಾಯಿ ಹಾಗೂ ತಮ್ಮನನ್ನು ಕರೆಸಿ ಮನವೊಲಿಸಿದ್ದರು.

ರಿವಾಲ್ವರ್‌ ಆತ ಕೆಳಗೆ ತೋರಿಸಿದಾಗ ಎಸ್‌ಪಿ ಇಶಾಪಂತ್‌ ಜಿಗಿದು ಜಿಗಿದು ಕಸಿದುಕೊಂಡಿದ್ದಾರೆ. ರಿವಾಲ್ವರ್‌ ವಾಪಸ್‌ ಪಡೆದು ಆತನನ್ನು ಮರದಿಂದ ಕೆಳಗಿಳಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಟಾಪ್ ನ್ಯೂಸ್