ಯುವತಿಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಡಲು ಯತ್ನಿಸಿದ ಕುಟುಂಬ; ಆಘಾತಕಾರಿ ಘಟನೆ ವರದಿ

ಉತ್ತರಪ್ರದೇಶ; ಹಾಪುರ್ ಜಿಲ್ಲೆಯ ನವಡಾ ಖುರ್ಡ್ ಗ್ರಾಮದಲ್ಲಿ ಯುವತಿಯೊಬ್ಬಳನ್ನು ಆಕೆಯ ಕುಟುಂಬಸ್ಥರು ಬೆಂಕಿ ಹಚ್ಚಿ, ಜೀವಂತ ದಹನಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.

ಘಟನೆಯಲ್ಲಿ ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಗೆ ಶೇ.70ರಷ್ಟು ಸುಟ್ಟಗಾಯಗಳಾಗಿದೆ.

ಅವಿವಾಹಿತ ಯುವತಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದ ಆಕೆಯ ತಾಯಿ ಹಾಗೂ ಸಹೋದರ ಬೆಂಕಿ ಹಚ್ಚಿ ಯುವತಿಗೆ ಜೀವಂತ ದಹನಕ್ಕೆ ಯತ್ನಿಸಿದ್ದಾರೆ. ಯುವತಿಯ ತಾಯಿ ಮತ್ತು ಸಹೋದರ ಆಕೆಯನ್ನು ಮನೆ ಸಮೀಪದ ಕಾಡಿಗೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಪೆಟ್ರೋಲ್ ಎರಚಿ ಸಜೀವ ದಹನ ಮಾಡಲು ಪ್ರಯತ್ನಿಸಿದ್ದಾರೆ.

ಘಟನೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ. ಆಕೆಯ ತಾಯಿ ಹಾಗೂ ಸೋದರನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ಹಾಪುರ್ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜಕುಮಾರ್ ಅಗರ್ವಾಲ್, ಸೆ.28ರಂದು ಆರೋಪಿಗಳು ಸಂತ್ರಸ್ತೆಯನ್ನು ಕಾಡೊಂದರ ಸಮೀಪ ಕೊಂಡೊಯ್ದು ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್