ಬೆಂಗಳೂರು;ಕರ್ನಾಟಕ ಸರಕಾರದಲ್ಲಿ ಕಾಂಗ್ರೆಸ್ ನೂತನ ಸರಕಾರ ರಚನೆ ಮಾಡುತ್ತಿದೆ.ಇನ್ನೊಂದು ಕಡೆ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಸಿಬಿಐನ ನಿರ್ದೇಶಕನಾಗಿ ನೇಮಕ ಮಾಡಲಾಗಿದೆ.ಈ ಅನಿರೀಕ್ಷಿತೆ ಬೆಳವಣಿಗೆ ಕಾಂಗ್ರೆಸ್ ನ ಮುಖ್ಯಮಂತ್ರಿ ಆಯ್ಕೆ ಮೇಲೆ ಪರಿಣಾಮ ಬೀರುತ್ತಾ ಎನ್ನುವ ಪ್ರಶ್ನೆ ಮೂಡಿದೆ.
ಈ ಮೊದಲು ಕಾಂಗ್ರೆಸ್ ಅದರಲ್ಲೂ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ನಡುವಿನ ಸಂಬಂಧ ಹದಗೆಟ್ಟಿತ್ತು ಎನ್ನಲಾಗಿದೆ.
ಡಿಕೆಶಿ ಪಬ್ಲಿಕ್ ನಲ್ಲಿ ಪ್ರವೀಣ್ ಸೂದ್ ನಾಲಾಯಕ್ ಆಗಿದ್ದಾರೆ.ತಮ್ಮ ಕರ್ತವ್ಯ ನಿರ್ವಹಿಸಲು ಅವರು ಅಯೋಗ್ಯ.ಅವರು ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ.ಈಗಾಗಲೇ ಅವರು ಮೂರು ವರ್ಷ ಡಿಜಿಪಿಯಾಗಿ ಇಲ್ಲಿದ್ದಾರೆ. ಇನ್ನೂ ಎಷ್ಟು ವರ್ಷ ಇದೇ ಹುದ್ದೆಯಲ್ಲಿರಬೇಕು ಅಂದುಕೊಂಡಿದ್ದಾರೆ? ಕಾಂಗ್ರೆಸ್ ನಾಯಕರ ವಿರುದ್ಧ ಅವರು 25ಕ್ಕೂ ಹೆಚ್ಚು ಕೇಸ್‌ಗಳನ್ನು ದಾಖಲಿಸಿದ್ದಾರೆ. ಆದರೆ, ಬಿಜೆಪಿ ಮುಖಂಡರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಿಸಿಲ್ಲ. ಚುನಾವಣೆ ಆಯೋಗಕ್ಕೂ ನಾವು ಸೂದ್ ವಿರುದ್ಧ ದೂರು ನೀಡಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.
ಮಾರ್ಚ್ 18ರಂದು ಮೈಸೂರು ದೊರೆ ಟಿಪ್ಪು ಸುಲ್ತಾನ್ ಮತ್ತು ಉರಿಗೌಡ ನಂಜೇಗೌಡ ವಿಷಯದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಮಾನು ನಿರ್ಮಿಸಿದ್ದರು. ಆ ಸಂದರ್ಭದಲ್ಲಿ ಸ್ವಾಗತ ಕಮಾನು ನಿರ್ಮಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಡಿಕೆಶಿ ಆರೋಪಿಸಿದ್ದರು.
ಚುನಾವಣೆಯಲ್ಲಿ ಗೆದ್ದು ನಾವು ಅಧಿಕಾರ ಹಿಡಿಯುತ್ತೇವೆ. ಆಗ ಇವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈ ಪ್ರವೀಣ್ ಸೂದ್ ವಿರುದ್ಧ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಬೇಕಿದೆ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಈಗ ಪ್ರವೀಣ್ ಸೂದ್‌ಗೆ ಸಿಬಿಐ ಸಾರಥ್ಯ ನೀಡಿರುವುದು ಕುತೂಹಲಕರವಾಗಿದೆ.ಇದಲ್ಲದೆ ಡಿ.ಕೆ. ಶಿವಕುಮಾರ್ ಅವರು ಹಿಂದಿನಿಂದ ಕೆಲವು ಪ್ರಕರಣಗಳನ್ನು ಎದುರಿಸುತ್ತಿರುವುದೂ ಗಮನಾರ್ಹವಾಗಿದೆ.
ಮೇ 25ಕ್ಕೆ ಹಾಲಿ ಸಿಬಿಐ ನಿರ್ದೇಶಕ ಸುಬೋದ್ ಕುಮಾರ್ ಜೈಸ್ವಾಲ್ ಅವಧಿ ಮುಕ್ತಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಸಿಬಿಐ ನಿರ್ದೇಶಕರ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆದಿದೆ. ಸದ್ಯ ಮೂವರು ಐಪಿಎಸ್ ಅಧಿಕಾರಿಗಳು ಹೆಸರು ಸಂಭಾವ್ಯ ಪಟ್ಟಿಯಲ್ಲಿತ್ತು. ಆದರೆ, ಅಂತಿಮವಾಗಿ ಪ್ರವೀಣ್ ಸೂದ್ ಅವರನ್ನು ಆಯ್ಕೆ ಮಾಡಲಾಗಿದೆ.