ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪೇದೆ

ಬೆಂಗಳೂರು: ಬಾಣಂತಿ ಪತ್ನಿಯನ್ನು ಕೊಲೆ ಮಾಡಿ ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊಸಕೋಟೆ ತಾಲೂಕಿನ ಕೊಳತೂರು ಗ್ರಾಮದಲ್ಲಿ ವರದಿಯಾಗಿದೆ.

ಕೊಳತೂರು ಗ್ರಾಮದ ಪ್ರತಿಭಾ (28) ಕೊಲೆಯಾದವರು. ಪೇದೆ ಕಿಶೋರ್(31) ಕೊಲೆ ಆರೋಪಿ.

ಚಾಮರಾಜನಗರದಲ್ಲಿ ಪೊಲೀಸ್ ಪೇದೆಯಾಗಿರುವ ಕಿಶೋರ್ ಮತ್ತು ಪ್ರತಿಭಾಗೆ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಮದುವೆಯಾದ ಒಂದು ವರ್ಷದಲ್ಲೇ ಇವರಿಬ್ಬರ ನಡುವೆ ಹಲವು ಬಾರಿ ಗಲಾಟೆ ನಡೆದಿತ್ತು. ಕುಟುಂಬಸ್ಥರು ಇಬ್ಬರಿಗೂ ಹಲವು ಸಲ ಬುದ್ದಿ ಹೇಳಿದ್ದರು. 11 ದಿನಗಳ ಹಿಂದಷ್ಟೇ ಪ್ರತಿಭಾಗೆ ಮಗುವಾಗಿತ್ತು. ಹೀಗಾಗಿ ಬಾಣಂತನಕ್ಕೆ ತಂದೆ ಮನೆಗೆ ಬಂದಿದ್ದರು.

ಮಗು ನೋಡುವ ನೆಪದಲ್ಲಿ ಮಾವನ ಮನೆಗೆ ಬಂದವ ಮನೆಯಲ್ಲಿ ಪತ್ನಿ ಒಬ್ಬಳೆ ಇದ್ದ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಫ್ಯಾನಿಗೆ ಸೀರೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ.
ಇದೇ ವೇಳೆ ಮೃತ ಪ್ರತಿಭಾ ಪೋಷಕರು ಮನೆಗೆ ಬಂದಿದ್ದರಿಂದ ಬೆಚ್ಚಿಬಿದ್ದ ಕಿಶೋರ್ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕಿಶೊರ್ ತನ್ನ ಪತ್ನಿಯನ್ನು ಹತ್ಯಗೈದು ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿ ಕಿಶೋರ್ ಕೋಲಾರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್