ಬೀದರ್;ನಡು ರಸ್ತೆಯಲ್ಲಿ ನನಗೆ ಗುಂಡು ಹೊಡೆದು ಆರು ತಿಂಗಳಲ್ಲಿ ಉಪಚುನಾವಣೆ ನಡೆಸುವ ಮಾತುಗಳನ್ನು ಕೇಂದ್ರ ಸಚಿವ ಭಗವಂತ ಖೂಬಾ ಅವರ ಬೆಂಬಲಿಗರು ಆಡಿದ್ದಾರೆಂದು ತಿಳಿದು ಬಂದಿದೆ.ನನ್ನನ್ನು ಮುಗಿಸಿ. ಆದರೆ, ತಾಯಿಯಂತಿರುವ ಪಕ್ಷವನ್ನು ಮುಗಿಸಬೇಡಿ ಎಂದು ಔರಾದ್ ಶಾಸಕ, ಮಾಜಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ
ಔರಾದ್ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಪ್ರಥಮ ಬಿಜೆಪಿ ತಾಲೂಕು ಕಾರ್ಯಕಾರಿಣಿ ಉದ್ಘಾಟಿಸಿ ಪ್ರಭು ಚವ್ಹಾಣ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ನನಗೆ ಲಕ್ಕಿ ಶಾಸಕ, ಚುನಾವಣೆಗೂ ಮುನ್ನ ಔರಾದ್‌ಗೆ ಬಂದು ಒಂದೇ ತಿಂಗಳಲ್ಲಿ ಟಿಕೆಟ್ ಗಿಟ್ಟಿಸಿಕೊಂಡವನು ಎಂದೆಲ್ಲ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ವ್ಯಂಗ್ಯವಾಡಿದ್ದು ಖೂಬಾ ಅವರಿಗೆ ಶೋಭೆ ತರುವುದಿಲ್ಲ. ಬಿಜೆಪಿ ನನ್ನ ತಾಯಿಯಿದ್ದಂತೆ, ಕಾರ್ಯಕರ್ತರು ನನ್ನ ಕುಟುಂಬ ಸದಸ್ಯರು. 34 ವರ್ಷದಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದೇನೆ ಎಂದು ಹೇಳಿದ್ದಾರೆ.
ಔರಾದ್ ಕ್ಷೇತ್ರಕ್ಕೆ ಕಾಲೇಜು ತಂದಿದ್ದು ನಾನು, ಶಂಕುಸ್ಥಾಪನೆ ಸಹ ಆಗಿದೆ. ಆದರೆ, ತಮ್ಮ ಇಲಾಖೆಯಿಂದ ಮಂಜೂರಾತಿ ಇಲ್ಲದ ಕಾರಣ ನೆನೆಗುದಿಗೆ ಬಿದ್ದಿದ್ದರೂ ಅದಕ್ಕೂ ನನ್ನನ್ನೇ ಹೊಣೆ ಎಂಬಂತೆ ಮಾತನಾಡಿದ್ದೀರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.