ಅಹಮದಾಬಾದ್:ಮೋದಿ ಉಪನಾಮ ಬಳಕೆ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆಯಾಗಿದೆ.ಸೂರತ್ ಕೋರ್ಟ್ ಆದೇಶದ ಬೆನ್ನಲ್ಲೇ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೋಷಿ ಎಂದು ಸೂರತ್ ಕೋರ್ಟ್ ತೀರ್ಪು ನೀಡಿದ ನಂತರ ದೂರು ನೀಡಿದ್ದ ಗುಜರಾತ್ ನ ಮಾಜಿ ಸಚಿವ ಪೂರ್ಣೇಶ್ ಮೋದಿ ಮುನ್ನೆಲೆಗೆ ಬಂದಿದ್ದಾರೆ.
54ರ ಹರೆಯದ ಪೂರ್ಣೇಶ್ ಮೋದಿ ಗುಜರಾತ್ ನ ಭಾರತೀಯ ಜನತಾ ಪಕ್ಷದ ಶಾಸಕರಾಗಿದ್ದಾರೆ.ಆರಂಭದಲ್ಲಿ ಇವರು ಕೂಡ ಟೀ ಮಾರುತ್ತಿದ್ದರು ಎನ್ನುವುದು ವರದಿಯಾಗಿದೆ.ಬಳಿಕ ಪೂರ್ಣೇಶ್ ಅವರು ಕಾನೂನು ಪದವಿ ಪಡೆದು ವಕೀಲರಾಗಿ ಕಾರ್ಯನಿರ್ವಹಿಸಿದ್ದರು.
ಬಿಜೆಪಿ ಜೊತೆ ಗುರುತಿಸಿಕೊಂಡ ಪೂರ್ಣೇಶ್ ಮೋದಿ ಅವರು ಸೂರತ್ ಘಟಕದ ಬಿಜೆಪಿ ಅಧ್ಯಕ್ಷರಾಗಿ, ಶಾಸಕರಾಗಿ ಸಚಿವರಾಗಿ ಕೂಡ ಕಾರ್ಯನಿರ್ವಹಿಸಿದ್ದರು.
ರಾಹುಲ್ ಬಗ್ಗೆ ದೂರುನೀಡಲು ಕಾರಣರಾದ ವ್ಯಕ್ತಿ ಯಾರು ಗೊತ್ತಾ?
ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಪಿ.ಎಂ.ರಘುನಾಥ್ ಅವರು ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.ಲೋಕಸಭೆ ಚುನಾವಣೆ ನಿಮಿತ್ತ 2019ರ ಏಪ್ರಿಲ್ 13ರಂದು ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದಿದ್ದರು.
ರಾಹುಲ್ ಮಾತನಾಡುತ್ತಾ,ಅದು ಹೇಗೆ ಕಳ್ಳರ ಹೆಸರಿನಲ್ಲಿ ಸಾಮಾನ್ಯವಾಗಿ ‘ಮೋದಿ’ ಎಂಬ ಉಪನಾಮ ಕಂಡುಬರುತ್ತದೆ?’ ಎಂದು ಪ್ರಶ್ನಿಸಿದ್ದರು.
ಬಿಜೆಪಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಘುನಾಥ್ ಈ ಬಗ್ಗೆ ಅಸಮಾಧಾನಗೊಂಡಿದ್ದರು. ತಕ್ಷಣ
ಗುಜರಾತ್‌ನ ಸೂರತ್ ಶಾಸಕ, ಸ್ನೇಹಿತ ಪೂರ್ಣೇಶ್ ಮೋದಿ ಗಮನಕ್ಕೆ ತರುತ್ತಾರೆ.ಬಳಿಕ ಪೂರ್ಣೇಶ್ ಮೋದಿ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ರಘುನಾಥ್ ರಾಹುಲ್ ಭಾಷಣದ ಆಡಿಯೊ ಹಾಗೂ ವಿವಿಧ ಮಾಧ್ಯಮಗಳಲ್ಲಿ ಬಂದಿದ್ದ ಸುದ್ದಿ ಸಂಗ್ರಹಿಸಿ ಸೂರತ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 2021ರ ಜನವರಿ 1ರಂದು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದರು. ಈ ಪ್ರಕರಣ ವಿಚಾರವಾಗಿ ಐದಾರು ಬಾರಿ ಸೂರತ್‌ಗೆ ತೆರಳಿದ್ದರು.
67 ವರ್ಷ ವಯಸ್ಸಿನ ರಘುನಾಥ್ ಹಿರಿಯ ಆರೆಸ್ಸೆಸ್ ಕಾರ್ಯಕರ್ತ, ಜೊತೆಗೆ ಕೋಲಾರ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದರು ಎಂದು ವರದಿ ತಿಳಿಸಿದೆ.