ಗಾಯದ ಮೇಲೆ ಮೆಣಸಿನ ಪುಡಿ ಎರಚಿ ಪ್ರಜ್ಞೆ ಕಳೆದುಕೊಳ್ಳುವವರೆಗೂ ಚಿತ್ರಹಿಂಸೆ ನೀಡಿದ್ರು: ಸೇನಾಧಿಕಾರಿಗಳ ಚಿತ್ರಹಿಂಸೆ ಬಿಚ್ಚಿಟ್ಟ ಸಂತ್ರಸ್ತ…

ಪೂಂಛ್ ನಲ್ಲಿ ಸೇನಾ ಪಡೆಗಳ ವಿರುದ್ಧ ಮೂವರು ನಾಗರಿಕರ ಹತ್ಯೆಯ ಆರೋಪ ಕೇಳಿ ಬಂದಿತ್ತು. ಇದೀಗ ಭದ್ರತಾ ಪಡೆಗಳಿಂದ ಬಂಧಿತ ವ್ಯಕ್ತಿಗಳಲ್ಲಿ ಓರ್ವರು ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾರೆ. ನಮ್ಮನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ ಮತ್ತು ಅವರು ಗಾಯಗಳ ಮೇಲೆ ಮೆಣಸಿನ ಪುಡಿ ಎರಚಿ ಪ್ರಜ್ಞೆ ಕಳೆದುಕೊಳ್ಳುವವರೆಗೂ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಆಸ್ಪತ್ರೆಯಿಂದಲೇ ಮಾದ್ಯಮಗಳ ಜೊತೆ ಮಾತನಾಡಿದ ಮೊಹಮ್ಮದ್ ಅಶ್ರಫ್ (52), ಕಳೆದ ವಾರ ಸೇನಾಪಡೆಗಳು ತನ್ನನ್ನು ಮತ್ತು ಇತರ ನಾಲ್ವರನ್ನು ಕರೆದೊಯ್ದಿದ್ದರು. ನಂತರ ಅವರು ನಮ್ಮ ಬಟ್ಟೆಗಳನ್ನು ಬಿಚ್ಚಿಸಿ ಲಾಠಿ ಮತ್ತು ಕಬ್ಬಿಣದ ರಾಡ್ಗಳಿಂದ ಹೊಡೆದರು ಮತ್ತು ನಮ್ಮ ಮೇಲಾದ ಗಾಯಗಳ ಮೇಲೆ ಮೆಣಸಿನ ಪುಡಿಯನ್ನು ಹಾಕಿದ್ದಾರೆ ಎಂದು ಹೇಳಿದ್ದಾರೆ.

ಜಮ್ಮು-ಕಾಶ್ಮೀರದ ಪೂಂಚ್ನಲ್ಲಿ ಉಗ್ರರು ನಡೆಸಿದ ಹೊಂಚು ದಾಳಿಯಲ್ಲಿ ನಾಲ್ವರು ಸೇನಾಧಿಕಾರಿಗಳ ಹತ್ಯೆ ನಡೆದಿತ್ತು. ಘಟನೆಗೆ ಸಂಬಂಧಿಸಿ ಸೇನಾಧಿಕಾರಿಗಳು 8 ಮಂದಿ ನಾಗರಿಕರನ್ನು ವಶಕ್ಕೆ ಪಡೆದುಕೊಂಡಿದ್ದರು. ಅದರಲ್ಲಿ ಮೂವರು ನಾಗರಿಕರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಅಶ್ರಫ್ ಸೇರಿದಂತೆ ಐವರನ್ನು ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಮೊದಲು ಸೇನಾ ಸಿಬ್ಬಂದಿಯೋರ್ವ, ವ್ಯಕ್ತಿಯೊಬ್ಬನಿಗೆ ಕಬ್ಬಿಣದ ರಾಡ್ ಮತ್ತು ಲಾಠಿಗಳಿಂದ ಥಳಿಸುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ.

ಆ ವೀಡಿಯೊದಲ್ಲಿರುವ ವ್ಯಕ್ತಿ ನಾನು, ಈ ಆಘಾತದಿಂದ ಕಳೆದ ಶನಿವಾರದಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ದೇಹದಾದ್ಯಂತ ತೀವ್ರವಾದ ನೋವು ಮತ್ತು ಚಿತ್ರಹಿಂಸೆಯ ದೃಶ್ಯಗಳು ಕಣ್ಣ ಮುಂದೆ ಇದೆ. ಇದರಿಂದ ನಿದ್ರೆಯೇ ಬಂದಿಲ್ಲ ಎಂದು ಅಶ್ರಫ್ ಹೇಳಿದ್ದಾರೆ.

ರಜೌರಿ ಜಿಲ್ಲೆಯ ಥಾನಮಂಡಿ ಪ್ರದೇಶದ ನಿವಾಸಿ ಅಶ್ರಫ್ 2007ರಿಂದ ಜಮ್ಮು-ಕಾಶ್ಮೀರದ ವಿದ್ಯುತ್ ಇಲಾಖೆಯಲ್ಲಿ ಲೈನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ತಿಂಗಳಿಗೆ 9,330ರೂ.ವೇತನ ನೀಡಲಾಗುತ್ತಿತ್ತು. ಅವರಿಗೆ ಓರ್ವ ಮಗಳು ಸೇರಿ ಮೂವರು ಮಕ್ಕಳಿದ್ದಾರೆ. ಅವರ ಪತ್ನಿ ಈ ವರ್ಷ ಮಾ. 23ರಂದು ಮೃತಪಟ್ಟಿದ್ದರು.

ಅಶ್ರಫ್ ಅವರೊಂದಿಗೆ ರಾಜೌರಿ ಆಸ್ಪತ್ರೆಯಲ್ಲಿ ಫಾರೂಕ್ ಅಹ್ಮದ್ (45), ಫಝಲ್ ಹುಸೇನ್(50), ಸೋದರಳಿಯರಾದ ಮೊಹಮ್ಮದ್ ಬೇತಾಬ್ (25), ಹುಸೇನ್ ಮತ್ತು ಇನ್ನೊಬ್ಬ 15 ವರ್ಷದ ಬಾಲಕ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇವರೆಲ್ಲರೂ ಕೂಡ ಥಾನಮಂಡಿ ಪ್ರದೇಶದವರಾಗಿದ್ದರು.

ಆಸ್ಪತ್ರೆಯ ವೈದ್ಯರು ಆಸ್ಪತ್ರೆಗೆ ದಾಖಲಾಗಿದ್ದ ಐವರಿಗೂ ಗಾಯಗಳಿವೆ ಎಂದು ಹೇಳಿದ್ದರು, ಆದರೆ ಈ ಬಗ್ಗೆ ಹೆಚ್ಚಿನದ್ದನ್ನು ಏನೂ ವಿವರಿಸಿರಲಿಲ್ಲ. ನಮಗೆ ಯಾರಿಗೂ ನಿಲ್ಲಲು ಮತ್ತು ಕುಳಿತುಕೊಳ್ಳಲು ಆಗುತ್ತಿಲ್ಲ. ನಾವು ಶೌಚಾಲಯಕ್ಕೆ ಹೋಗಬೇಕಾದರೆ ಆಸ್ಪತ್ರೆ ಸಿಬ್ಬಂದಿಗಳು ನಮ್ಮನ್ನು ಗಾಲಿಕುರ್ಚಿ ಅಥವಾ ಸ್ಟ್ರೆಚರ್ಗಳಲ್ಲಿ ಕರೆದೊಯ್ಯುತ್ತಾರೆ ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ನನ್ನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. DKG ಶಿಬಿರಕ್ಕೆ ಫಾರೂಕ್ ಅಹ್ಮದ್, ಮೊಹಮ್ಮದ್ ಬೇತಾಬ್ ಮತ್ತು ಅವನ ಸಹೋದರನ ಜೊತೆ ಕೆರದುಕೊಂಡು ಹೋಗಿದ್ದಾರೆ. ನಾವು ಅಲ್ಲಿಗೆ ತಲುಪಿದ ನಂತರ ಬೆಳಿಗ್ಗೆ 10.30ಕ್ಕೆ ಅವರು ನಮ್ಮ ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಿದರು ಮತ್ತು ಏನನ್ನೂ ಹೇಳದೆ ಲಾಠಿ ಮತ್ತು ಕಬ್ಬಿಣದ ರಾಡ್ಗಳಿಂದ ನಮಗೆ ಹೊಡೆಯಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಅವರು ನಮ್ಮನ್ನು ವಿವಸ್ತ್ರಗೊಳಿಸಿ ಮತ್ತೆ ಲಾಠಿ ಮತ್ತು ಕಬ್ಬಿಣದ ರಾಡ್ಗಳಿಂದ ಹೊಡೆಯಲು ಪ್ರಾರಂಭಿಸಿದರು ಮತ್ತು ನಾವು ಪ್ರಜ್ಞಾಹೀನರಾಗುವವರೆಗೂ ನಮ್ಮ ಗಾಯಗಳ ಮೇಲೆ ಮೆಣಸಿನ ಪುಡಿಯನ್ನು ಹಾಕಿದ್ದರು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್