PFI & ಸಹ ಸಂಘಟನೆಗಳ ನಿಷೇಧದ ನಿರ್ಧಾರವನ್ನು ಎತ್ತಿ ಹಿಡಿದ UAPA ಟ್ರಿಬ್ಯುನಲ್

ನವದೆಹಲಿ; ಪಿಎಫ್ ಐ ನಿಷೇಧದ ಐದು ತಿಂಗಳ ನಂತರ, ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅಧ್ಯಕ್ಷತೆಯ ಕಾನೂನುಬಾಹಿರ ಚಟುವಟಿಕೆಗಳ ನ್ಯಾಯಮಂಡಳಿಯು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಅಂಗಸಂಸ್ಥೆಗಳನ್ನು ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದಿದೆ.

ಕಳೆದ ವರ್ಷ ಸೆಪ್ಟೆಂಬರ್ 28 ರಂದು, ಗೃಹ ವ್ಯವಹಾರಗಳ ಸಚಿವಾಲಯವು ಗೆಜೆಟ್ ಅಧಿಸೂಚನೆಯಲ್ಲಿ PFI ಸೇರಿ ಸಹ ಸಂಘಟನೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ರಿಹಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ನ್ನು ಐದು ವರ್ಷಗಳ ಕಾಲ‌ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು.

ಪಿಎಫ್‌ಐ ಮತ್ತದರ ಸಹಸಂಘಟನೆಗಳ ವಿರುದ್ಧ ಮಂಡಿಸಲಾದ ಸಾಕ್ಷ್ಯವು ವಿಶ್ವಾಸಾರ್ಹವಾಗಿದೆ ಎಂದು ದಿಲ್ಲಿ ಹೈಕೋರ್ಟಿನ ಜಸ್ಟಿಸ್‌ ದಿನೇಶ್‌ ಕುಮಾರ್‌ ಶರ್ಮ ಅವರ ನೇತೃತ್ವದ ಟ್ರಿಬ್ಯುನಲ್‌ ಹೇಳಿದೆ ಹಾಗೂ ಈ ಸಂಘಟನೆಗಳು ದೇಶದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ರಚಿಸುವ ಉದ್ದೇಶ ಹೊಂದಿದ್ದವು ಹಾಗೂ ಹಿಂದು ಸಮುದಾಯದ ರಾಜಕೀಯ ಪ್ರಮುಖರ ಕೊಲೆಗಳನ್ನು ನಡೆಸಿವೆ ಎಂದು ಕೇಂದ್ರದ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದೆ.

ಪಿಎಫ್‌ಐ ಚಟುವಟಿಕೆಗಳ ಕುರಿತಂತೆ ಸಾಕಷ್ಟು ಸಾಕ್ಷ್ಯಾಧಾರ ಹಾಜರುಪಡಿಸಲು ಕೇಂದ್ರ ಸರ್ಕಾರ ಸಫಲವಾಗಿದೆ ಎಂದು ಟ್ರಿಬ್ಯುನಲ್‌ ಕಂಡುಕೊಂಡಿದೆ ಎಂದು ಕೇಂದ್ರದ ಪರ ಹಾಜರಿದ್ದ ಹಿರಿಯ ವಕೀಲ ಪುನೀತ್‌ ಮಿತ್ತಲ್‌ ಹೇಳಿದರು.

ಈ ಸಂಘಟನೆಗಳು ಕಡತಗಳಲ್ಲಿ ಪ್ರಶಂಸಾರ್ಹ ಉದ್ದೇಶವನ್ನು ಹೊಂದಿದ್ದರೂ ಅವುಗಳು ನಡೆಸುವ ಅಕ್ರಮ ಚಟುವಟಿಕೆಗಳು ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಪಾಯವೊಡ್ಡಿವೆ ಎಂದು ಕೇಂದ್ರದ ಅಭಿಪ್ರಾಯವನ್ನು ತನ್ನ 285 ಪುಟಗಳ ವರದಿಯಲ್ಲಿ ಟ್ರಿಬ್ಯುನಲ್‌ ಒಪ್ಪಿದೆ.

ಟಾಪ್ ನ್ಯೂಸ್