ಪಾಕಿಸ್ತಾನ;ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಬಂಧಿಸಲಾಗಿದೆ ಎಂದ ವರದಿಯಾಗಿದೆ.
ವರದಿಯ ಪ್ರಕಾರ, ಈ ಬೆಳವಣಿಗೆಯನ್ನು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ವಕೀಲ ಫೈಸಲ್ ಚೌಧರಿ ಖಚಿತಪಡಿಸಿದ್ದಾರೆ.
ಅಲ್ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಕಾಣಿಸಿಕೊಂಡ ನಂತರ ಪಿಟಿಐ ಪಕ್ಷದ ಅಧ್ಯಕ್ಷ ಖಾನ್ ಅವರನ್ನು ಪಾಕಿಸ್ತಾನಿ ರೇಂಜರ್‌ಗಳು ವಶಕ್ಕೆ ತೆಗೆದುಕೊಂಡರು. ಖಾಸಗಿ ರಿಯಲ್ ಎಸ್ಟೇಟ್ ಕಂಪನಿಯಾದ ಬಹ್ರಿಯಾ ಟೌನ್, ಪಿಟಿಐ ಅಧ್ಯಕ್ಷ ಮತ್ತು ಅವರ ಪತ್ನಿ ಒಡೆತನದ ಅಲ್-ಖಾದಿರ್ ಟ್ರಸ್ಟ್‌ಗೆ 530 ಮಿಲಿಯನ್ ಪಾಕಿಸ್ತಾನಿ ರೂಪಾಯಿ ಮೌಲ್ಯದ ಭೂಮಿಯನ್ನು ಮಂಜೂರು ಮಾಡಿದೆ ಎಂದು ಆರೋಪಿಸಲಾಗಿದೆ.
ಇಮ್ರಾನ್ ಖಾನ್ ಇಂದು ಹೈಕೋರ್ಟ್‌ಗೆ ಹಾಜರಾಗಿದ್ದರು ಈ ವೇಳೆ ಅವರನ್ನು ಬಂಧಿಸಲಾಗಿದೆ ಎಂದು ಇಮ್ರಾನ್ ಖಾನ್ ಪರ ವಕೀಲ ಫೈಸಲ್ ಚೌಧರಿ ಕೂಡ ದೃಢಪಡಿಸಿದ್ದಾರೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.
ಪೊಲೀಸರು ಇಮ್ರಾನ್ ಖಾನ್ ಅವರನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಈ ವಿಡಿಯೊ ಬಗ್ಗೆ ಖಚಿತವಾಗಿಲ್ಲ.
ಇಮ್ರಾನ್ ಖಾನ್ ಅವರನ್ನು ಬಂಧನದ ವೇಳೆ ಸೇನಾಪಡೆ ಅಧಿಕಾರಿಗಳು ತಳ್ಳಿದ್ದಾರೆ. ಪಾಕಿಸ್ತಾನದ ಜನರೇ, ಇದು ನಿಮ್ಮ ದೇಶವನ್ನು ಉಳಿಸುವ ಸಮಯ. ನಿಮಗೆ ಬೇರೆ ಯಾವುದೇ ಅವಕಾಶ ಸಿಗುವುದಿಲ್ಲ ಎಂದು ವಿಡಿಯೋ ಶೇರ್ ಮಾಡಿ ಇಮ್ರಾನ್ ಪಕ್ಷ ಹೇಳಿದೆ. ಪಾಕಿಸ್ತಾನದಾದ್ಯಂತ ಪ್ರತಿಭಟನೆ ಆರಂಭಿಸುವಂತೆ ಪಕ್ಷ ಕರೆ ನೀಡಿದೆ ಎಂದು ಪಿಟಿಐ ನಾಯಕ ಅಜರ್ ಮಶ್ವಾನಿ ಟ್ವೀಟ್ ಮಾಡಿದ್ದಾರೆ.