ನವದೆಹಲಿ;ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿಯನ್ನು ರದ್ದುಪಡಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿರುವ ಬೆನ್ನಲ್ಲೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದು, ತೆಲಂಗಾಣದಲ್ಲಿ ಮುಸ್ಲಿಮರಲ್ಲಿ ಹಿಂದುಳಿದಿರುವಿಕೆ ಆಧಾರದಲ್ಲಿ ಮೀಸಲಾತಿ ನೀಡಲಾಗುತ್ತಿದೆಯೇ ಹೊರತು ಧರ್ಮದ ಆಧಾರದಲ್ಲಿ ಅಲ್ಲ ಎಂದು ಹೇಳಿದ್ದಾರೆ.
ಹಿಂದುಳಿದ ಮುಸ್ಲಿಮರನ್ನು ತಲುಪುವಂತೆ ತಮ್ಮ ಕಾರ್ಯಕರ್ತರಿಗೆ ಪ್ರಧಾನಿ ಅವರು ಹೇಳುತ್ತಾರೆ. ಅಮಿತ್ ಶಾ ಮುಸ್ಲಿಮರ ಮೀಸಲಾತಿ ರದ್ದುಪಡಿಸುತ್ತೇವೆ ಎಂದು ಹೇಳುತ್ತಾರೆ ಎಂದು ಹೇಳಿದರು.
ತೆಲಂಗಾಣದಲ್ಲಿ ತಜ್ಞರ ವರದಿಗಳು ಮತ್ತು ಅಂದಿನ ಅವಿಭಜಿತ ಆಂಧ್ರಪ್ರದೇಶ ಸರ್ಕಾರದ ಒಬಿಸಿ ಆಯೋಗದ ವರದಿಗಳ ಆಧಾರದ ಮೇಲೆಯೇ ಮುಸ್ಲಿಮರಲ್ಲಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗಿದೆ. ಇಷ್ಟೆಲ್ಲ ತಿಳಿದು ಯಾಕೆ ಬಿಜೆಪಿ ಪಕ್ಷ ಹಿಂದುಳಿದ ಮುಸ್ಲಿಮರ ವಿರುದ್ಧವಿದೆ ಎಂದು ಒವೈಸಿ ಪ್ರಶ್ನಿಸಿದ್ದಾರೆ.
ಮುಸ್ಲಿಮರ ಮೀಸಲಾತಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ತೆಲಂಗಾಣ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ಬಗ್ಗೆ ಯಾಕ ಮಾತನಾಡುವುದಿಲ್ಲ. ಅವರ ಮೀಸಲಾತಿಯನ್ನು ಶೇಕಡ 6 ರಿಂದ 9ಕ್ಕೆ ಯಾವಾಗ ಹೆಚ್ಚಳ ಮಾಡುತ್ತಾರೆ? ಮುಸ್ಲಿಮರಲ್ಲಿ ಹಿಂದುಳಿದ ಜಾತಿಗಳಿಗೆ ಶೇಕಡ 12ರಷ್ಟು ಕೋಟಾವನ್ನು ನೀಡುವ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.