ಮುಜಾಫರ್‌ಪುರ;ಗರ್ಭಾಶಯದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಎರಡೂ ಕಿಡ್ನಿಗಳನ್ನು ವೈದ್ಯರ ಸೋಗಿನಲ್ಲಿ ಬಂದವ ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದೆ.
ಮುಜಾಫರ್‌ಪುರದ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುನೀತಾ ಅವರು ಅನ್ಯಾಯಕ್ಕೊಳಗಾದ ಸಂತ್ರಸ್ತೆ.
ದಿನಗೂಲಿ ಕೆಲಸ ಮಾಡುತ್ತಿದ್ದ ಸುನೀತಾ ತನ್ನ ಮೂವರು ಮಕ್ಕಳನ್ನು ಸಾಕುತ್ತಿದ್ದರು. ಈಗ ಕೆಲಸಕ್ಕೆ ಹೋಗಲಾಗದೇ ಆಸ್ಪತ್ರೆಗೆ ದಾಖಲಾಗಿರುವ ಆಕೆ ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತಿತರಾಗಿದ್ದಾರೆ.
ಕೆಲ ದಿನಗಳ ಹಿಂದಿನವರೆಗೂ ಸುನೀತಾ ಅವರ ಪತಿ ಅಕ್ಲು ರಾಮ್ ಆಕೆಯ ಜೊತೆಗಿದ್ದರು. ಆತನೂ ಆಕೆಗೆ ಕಿಡ್ನಿ ನೀಡಲು ಸಿದ್ಧನಾಗಿದ್ದ. ಆದರೆ ಆತನ ಕಿಡ್ನಿ ಹೊಂದಿಕೆಯಾಗಲಿಲ್ಲ. ಪತಿ ಇದೀಗ ಮೂವರು ಮಕ್ಕಳನ್ನು ಆಕೆಯ ಬಳಿ ಬಿಟ್ಟು ಓಡಿ ಹೋಗಿದ್ದಾನೆ.
ಸೆಪ್ಟೆಂಬರ್ 3 ರಂದು ಮುಜಾಫರ್‌ಪುರದ ಬರಿಯಾರ್‌ಪುರ ಚೌಕ್ ಬಳಿಯ ಶುಭಕಾಂತ್ ಕ್ಲಿನಿಕ್‌ನಲ್ಲಿ ಗರ್ಭಾಶಯದ ಸೋಂಕಿನ ಬಗ್ಗೆ ಚಿಕಿತ್ಸೆಗೆ ಹೋದಾಗ ಸುನೀತಾ ಅವರ ಕಿಡ್ನಿಗಳನ್ನು ವೈದ್ಯರಂತೆ ವರ್ತಿಸಿದ್ದ ವ್ಯಕ್ತಿ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪವನ್ ಎಂಬಾತನನ್ನು ಬಂಧಿಸಿದ್ದರು.