ಉಡುಪಿ; ತಾಯಿ- ಮಕ್ಕಳ ಕೊಲೆ ಪ್ರಕರಣ; ತನಿಖೆ ವೇಳೆ ಹಲವು ಅಂಶಗಳು ಬಯಲು..

ಉಡುಪಿ: ನೇಜಾರು ತಾಯಿ ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಎಸ್ಪಿ ತನಿಖೆಯ ಬಳಿಕ‌ ಮಹತ್ವದ ಮಾಹಿತಿ ನೀಡಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ಅರುಣ್ ಕುಮಾರ್, ತನಿಖೆಗೆ ಬೇಕಾದ ಎಲ್ಲಾ ದಾಖಲಾತಿ ಪ್ರಕ್ರಿಯೆ ಮಾಡಿದ್ದೇವೆ. ಆರೋಪಿ ಪ್ರವೀಣ್ ಮತ್ತು ಅಯ್ನಾಝ್ ಗೆ 8 ತಿಂಗಳಿನಿಂದ ಪರಿಚಯವಿತ್ತು.

2007 ಪೂನಾದಲ್ಲಿ ಪೊಲೀಸ್ ಆಗಿದ್ದ ಪ್ರವೀಣ್ ಉತ್ತಮ ಸಂಬಳಕ್ಕಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸೇರಿದ್ದಾನೆ. ಅಮಲು ಪದಾರ್ಥ ಸೇವನೆ ಮಾಡಿದ್ದಾನೋ ಎಂಬ ಬಗ್ಗೆ ಮೆಡಿಕಲ್ ವರದಿ ಬರಲಿದೆ ಎಂದು ಹೇಳಿದ್ದಾರೆ.

ಪ್ರವೀಣ್ ಆರಂಭದಲ್ಲಿ ಅಯ್ನಾಝ್ ಗೆ ಮೊದಲು ದಾಳಿ ಮಾಡಿ, ಬಳಿಕ ಹಸೀನಾ, ಅಫ್ನಾನ್, ಆಸಿಂ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಒಂದೇ ಚಾಕುವಿನಲ್ಲಿ ನಾಲ್ವರ ಕೊಲೆಗೈದಿದ್ದಾನೆ. ಬಳಿಕ ಬೇರೆ ಬೇರೆ ವಾಹನದಲ್ಲಿ ಪರಾರಿಯಾಗಿದ್ದಾನೆ. ಆರೋಪಿ ಕೈಯ ಗಾಯಕ್ಕೆ ಚಿಕಿತ್ಸೆ ಪಡೆದು ಚಾಕುವನ್ನು ಮನೆಯಲ್ಲಿ ಇಟ್ಟು ಹೆಂಡತಿಯ ತವರು ಮನೆಗೆ ಹೋಗಿದ್ದಾನೆ.

ಕುಡುಚಿಯಲ್ಲಿ ಆರೋಪಿಗೆ ಆಶ್ರಯ ನೀಡಿದ ವ್ಯಕ್ತಿಯ ವಿಚಾರಣೆ ಮಾಡಿದ್ದೇವೆ. ಹೆಚ್ಚುವರಿ ಮಾಹಿತಿ ಬೇಕಾಗಿದ್ದರೆ ಅವರಿಂದ ಮಾಹಿತಿ ಪಡೆಯಲಾಗುವುದು.ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ.

ಹಸೀನಾಗೆ ಆರ್ಥಿಕವಾಗಿ ಮೋಸವಾದ ಬಗ್ಗೆ ಮಾಹಿತಿ ಸಿಕ್ಕಿದೆ. ಕುಟುಂಬದಿಂದ ದೂರು ಪಡೆದುಕೊಂಡು ತನಿಖೆ ಮಾಡುತ್ತೇವೆ.ಅಯ್ನಾಝ್ ಕುಟುಂಬ ತನಿಖೆಗೆ ಬಹಳ ಸಹಕಾರ ಕೊಟ್ಟಿದ್ದಾರೆ.ನೂರ್ ಮೊಹಮ್ಮದ್ ಕುಟುಂಬ ಬಹಳ ನೋವಲ್ಲಿದ್ದಾರೆ ಎಂದು ಹೇಳಿದ್ದಾರೆ.

ನಾಲ್ವರ ಕೊಲೆ ಪ್ರಕರಣ ದೊಡ್ಡ ಸವಾಲಾಗಿತ್ತು.ನಾವು ತಂಡವಾಗಿ ಕೆಲಸ ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಚಾರ್ಜ್ ಶೀಟ್ ಸಲ್ಲಿಕೆಗೆ ಇನ್ನೂ 70-80 ದಿನ ಇದೆ. ಎಲ್ಲಾ ಸಾಕ್ಷಿಗಳ ಸಂಗ್ರಹ ಮಾಡುತ್ತಿದ್ದೇವೆ.ಸುಮಾರು 50 ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ. ಆರೋಪಿ ಪತ್ತೆ ಮಾಡಿದ ಪೊಲೀಸರಿಗೆ ಸೂಕ್ತ ಬಹುಮಾನ ಕೊಡುವ ಬಗ್ಗೆ ಶಿಫಾರಸ್ಸು ಮಾಡಿದ್ದೇನೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್