ನವದೆಹಲಿ;ನೂತನ ಸಂಸತ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿನೇಶ್ ಫೋಗಟ್,ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಕೆಲವು ಕುಸ್ತಿಪಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 35 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಅಥ್ಲೀಟ್‌ಗಳು ಮಹಿಳಾ ಸಮ್ಮಾನ್ ಮಹಾಪಂಚಾಯತ್ ಆಯೋಜಿಸಿದ್ದರು.
ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅವರ ಬಂಧನಕ್ಕೆ ಒತ್ತಾಯಿಸಿ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಮೊದಲು ಪೊಲೀಸರು ಕುಸ್ತಿಪಟುಗಳ ಮುಷ್ಕರವನ್ನು ತಡೆದಿದ್ದರು.ಜಂತರ್ ಮಂತರ್‌ನಿಂದ ಟೆಂಟ್‌ಗಳನ್ನು ತೆಗೆದುಹಾಕಿದರು. ಇಂದು ನೂತನ ಸಂಸತ್ ಕಟ್ಟಡದ ಎದುರು ಮಹಿಳಾ ಮಹಾ ಪಂಚಾಯತ್ ನಡೆಸಲು ಕುಸ್ತಿಪಟುಗಳು ನಿರ್ಧರಿಸಿದ್ದು ಮೆರವಣಿಗೆಗೆ ಸಿದ್ದತೆ ನಡೆಸಿದ್ದಾರೆ. ಆದರೆ ಇದಕ್ಕೆ ಒಪ್ಪದ ದೆಹಲಿ ಪೊಲೀಸರು ಮಾರ್ಗದುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಹಾಕಿ ಅಡ್ಡಗಟ್ಟಿದ್ದಾರೆ.
35 ದಿನಗಳಿಂದ ನ್ಯಾಯಕ್ಕಾಗಿ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳು ಕೇಂದ್ರದ ಮಧ್ಯಸ್ತಿಕೆ ಪ್ರಸ್ತಾಪಗಳಿಗೆ ಒಪ್ಪದೇ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ.
ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಮತ್ತು ಕುಸ್ತಿ ಫಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ರನ್ನು ಬಂಧಸಿಬೇಕೆಂದು ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ.