ಕಡಬ;ಆಲ್ಟೋ ಕಾರು ಮತ್ತು ತೂಫಾನ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರ ಗುರುತು ಪತ್ತೆಯಾಗಿದೆ.
ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣದ ಸೇತುವೆ ಸಮೀಪ ನಡೆದ ಅಪಘಾತದಲ್ಲಿ ಮಗು ಸೇರಿ ನಾಲ್ವರು ಮೃತಪಟ್ಟು, ಹಲವರು ಗಂಭೀರ ಗಾಯಗೊಂಡಿದ್ದರು.
ಮೃತರು ಬೇಲೂರು ಮೂಲದವರು ಎಂದು ತಿಳಿದಿದ್ದು, ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದರು ಎಂದು ಹೇಳಲಾಗಿದೆ. ತೂಫಾನ್ ವಾಹನವು ಹಾಸನ ಕಡೆಯದ್ದು ಎನ್ನಲಾಗಿದೆ.
ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತಕ್ಕೆ ಅತಿ ವೇಗದ ಚಾಲನೆ ಕಾರಣವೆಂದು ಹೇಳಲಾಗುತ್ತಿದೆ.
ಆಲ್ಟೋ ಕಾರಿನಲ್ಲಿದ್ದ ಉಲ್ಲಾಸ್(28) ಗಣೇಶ್(26) ತಾನ್ವಿಕ್(4) ಮೃತರು.ಅದೇ ರೀತಿ ತೂಫಾನ್ ನಲ್ಲಿದ್ದ ನೇತ್ರಾವತಿ ಎಂಬ ಮಹಿಳೆ ಮೃತಪಟ್ಟಿದ್ದಾರೆ.ಇದಲ್ಲದೆ ಎರಡೂ ವಾಹನದಲ್ಲಿದ್ದ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.