ನವದೆಹಲಿ:ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು ಮುಸ್ಲಿಮೇತರ ಮಕ್ಕಳಿಗೆ ಪ್ರವೇಶ ನೀಡುವ ಎಲ್ಲಾ ಮಾನ್ಯತೆ ಪಡೆದ ಮದರಸಾಗಳ ವಿವರವಾದ ತನಿಖೆ ನಡೆಸುವಂತೆ ಸೂಚಿಸಿದೆ.
ಮುಸ್ಲಿಮೇತರ ವಿದ್ಯಾರ್ಥಿಗಳನ್ನು ಮದರಸಾದಿಂದ ಔಪಚಾರಿಕ ಶಾಲೆಗೆ ಸೇರಿಸಲು NCPCR ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿದೆ.
ಗುರುವಾರದಂದು ಎನ್ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು ಸಹಿ ಮಾಡಿರುವ ಪತ್ರದಲ್ಲಿ ವಿವಿಧ ದೂರುಗಳ ಆಧಾರದ ಮೇಲೆ ಸೂಚನೆ ನೀಡಲಾಗಿದೆ.
ಮುಸ್ಲಿಮೇತರ ಸಮುದಾಯಕ್ಕೆ ಸೇರಿದ ಮಕ್ಕಳು ಸರ್ಕಾರದ ಅನುದಾನದಲ್ಲಿ ಹಾಜರಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು 30 ದಿನಗಳಲ್ಲಿ ರಾಜ್ಯಗಳಿಂದ ಕ್ರಮ ಕೈಗೊಂಡ ವರದಿಯನ್ನು ಆಯೋಗ ಕೇಳಿದೆ.
ಇಸ್ಲಾಂ ಹೊರತುಪಡಿಸಿ ಇತರ ಧರ್ಮದ ವಿದ್ಯಾರ್ಥಿಗಳೂ ಮದರಸಾಗಳಲ್ಲಿ ಓದುತ್ತಿರುವುದು ಕಂಡುಬಂದಿದೆ, ಮುಸ್ಲಿಮೇತರ ಸಮುದಾಯಕ್ಕೆ ಸೇರಿದ ಮಕ್ಕಳು ಸರ್ಕಾರಿ ಅನುದಾನಿತ / ಮಾನ್ಯತೆ ಪಡೆದ ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದಲ್ಲದೆ ಕೆಲವು ರಾಜ್ಯ / ಕೇಂದ್ರಾಡಳಿತ ಸರ್ಕಾರಗಳು ಅವರಿಗೆ ವಿದ್ಯಾರ್ಥಿವೇತನವನ್ನು ಸಹ ನೀಡುತ್ತಿವೆ ಎಂದು ಆಯೋಗಕ್ಕೆ ಮಾಹಿತಿ ತಿಳಿದುಬಂದಿದೆ ಎಂದು ಹೇಳಿದೆ.
ಇದು ಸಂವಿಧಾನದ 28(3)ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರಿಯಾಂಕ್ ಹೇಳಿರುವ ಬಗ್ಗೆ ವರದಿಯಾಗಿದೆ.