ಆಟೋ ಹತ್ತಿದ ಯುವತಿಯ ಮಾತಿಗೆ ಮರುಳಾಗಿ 23,000ರೂ.ಕಳೆದುಕೊಂಡ ಚಾಲಕ;ಖತರ್ನಾಕ್ ಲೇಡಿ ಮಾಡಿದ್ದೇನು ಗೊತ್ತಾ?

ಬೆಂಗಳೂರು;ಫೋನ್‌ ಪೇ ಮಾಡುವುದಾಗಿ ನಂಬಿಸಿ ಅಂಗವಿಕಲ ಆಟೋ ಚಾಲಕನಿಂದ 23,500ರೂ. ಪಡೆದು ಮಹಿಳಾ ಪ್ರಯಾಣಿಕರೊಬ್ಬರು ವಂಚಿಸಿರುವ ಘಟನೆ ನಡೆದಿದೆ.

ನಾಗರಭಾವಿ ಸಮೀಪದ ಮಹದೇಶ್ವರ ಲೇಔಟ್‌ ನಿವಾಸಿ ಶಿವಕುಮಾರ್‌ ಮೋಸ ಹೋಗಿದ್ದು, ಆ.4ರಂದು ಶಿವಕುಮಾರ್‌ ಅವರ ಆಟೋದಲ್ಲಿ ಚಂದ್ರಾಲೇಔಟ್‌ ನಿಂದ ಬನಶಂಕರಿಗೆ ತೆರಳುತ್ತಿದ್ದ ಯುವತಿ ವಂಚಿಸಿದ್ದಾಳೆ.

ಈ ಬಗ್ಗೆ ಸಂತ್ರಸ್ತ ಚಾಲಕ ನೀಡಿದ ದೂರಿನ ಮೇರೆ ಎಫ್‌ಐಆರ್‌ ದಾಖಲಿಸಿ ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಆಟೋ ಚಾಲಕ ಶಿವಕುಮಾರ್‌ ಎಂದಿನಂತೆ ಇದೇ ತಿಂಗಳ 4ರಂದು ಬಾಡಿಗೆ ಮಾಡಲು ತೆರಳಿದ್ದರು.ಆಗ ಚಂದ್ರಾಲೇಔಟ್‌ ಬಳಿ ಅವರ ಆಟೋಗೆ ಯುವತಿಯೊಬ್ಬಳು ಹತ್ತಿದ್ದು, ಬನಶಂಕರಿಗೆ ಹೋಗಬೇಕು ಎಂದು ಹೇಳಿದ್ದಾರೆ.ಬಳಿಕ ಮಾರ್ಗ ಮಧ್ಯೆ ತನಗೆ ಹೊಸಕೆರೆಹಳ್ಳಿಯ ಪಿಇಎಸ್‌ ಕಾಲೇಜಿನಲ್ಲಿ ಶುಲ್ಕ ಪಾವತಿಸಲು ನಗದು ಹಣ ಬೇಕಿದೆ. ನಾನು ಫೋನ್‌ಪೇ ಮಾಡುತ್ತೇನೆ ಎಂದು ಶಿವಕುಮಾರ್‌ ಬಳಿ ಹಣಕ್ಕೆ ಆರೋಪಿ ಮನವಿ ಮಾಡಿದ್ದಾಳೆ.

ಆಕೆಯ ಮಾತಿಗೆ ಮರುಳಾಗಿ ರಿಕ್ಷಾ ಚಾಲಕ ತನ್ನ ಸ್ನೇಹಿತನಿಗೆ ಕರೆ ಮಾಡಿ ಕರೆಸಿಕೊಂಡು ಹಣ ಪಡೆದು ಯುವತಿಗೆ ನೀಡಿದ್ದಾರೆ.ತರುವಾಯ ಹೊಸಕೆರೆಹಳ್ಳಿ ಬಳಿ ಆಟೋದಿಂದ ಇಳಿದ ಯುವತಿ, ಕೆಲವೇ ನಿಮಿಷದಲ್ಲಿ ನಿಮಗೆ ಫೋನ್‌ಪೇ ಮಾಡುತ್ತೇನೆ ಎಂದು ಹೇಳಿ ಕಾಲ್ಕಿತ್ತಿದ್ದಾಳೆ.

ಕೊನೆಗೆ ಯುವತಿಗೆ ಕಾದು ಬೇಸತ್ತ ಬಳಿಕ ಆಟೋ ಚಾಲಕನಿಗೆ ಮೋಸ ಹೋಗಿರುವುದು ಅರಿವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್