ಮಸೀದಿಗೆ ನುಗ್ಗಿ ಇಮಾಮ್ ಗೆ ಥಳಿಸಿ ಜೈ ಶ್ರೀರಾಂ ಹೇಳುವಂತೆ ಆಗ್ರಹ, ಪ್ರಜ್ಞೆ ತಪ್ಪಿಸಿ ಗಡ್ಡ ಕತ್ತರಿಸಿ ದೌರ್ಜನ್ಯ
ಮಹಾರಾಷ್ಟ್ರ; ಅನ್ವರ್ ಗ್ರಾಮದ ಮಸೀದಿಯೊಂದಕ್ಕೆ ನುಗ್ಗಿದ ಅಪರಿಚಿತ ಮುಸುಕುಧಾರಿ ದಾಳಿಕೋರರು ಇಮಾಮ್ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅವರ ಗಡ್ಡವನ್ನು ಕತ್ತರಿಸಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಮಸೀದಿಗೆ ನುಗ್ಗಿದ ಮುಸುಕುಧಾರಿಗಳಿಂದ ಜೈ ಶ್ರೀರಾಮ್ ಎಂದು ಕೂಗಲು ನಿರಾಕರಿಸಿದ್ದಕ್ಕಾಗಿ ಇಮಾಮ್ ಅವರನ್ನು ಥಳಿಸಿ, ಗಡ್ಡ ಕತ್ತರಿಸಿದ್ದಾರೆ ಎಂದು ಎಪಿಎನ್ ಲೈವ್ ನ್ಯೂಸ್ ವರದಿ ಮಾಡಿದೆ.
ವರದಿಗಳ ಪ್ರಕಾರ, ಬಲಿಯಾದ ಜಾಕಿರ್ ಸಯ್ಯದ್ ಖಾಜಾ ಭಾನುವಾರ ಸಂಜೆ 7:30 ರ ಸುಮಾರಿಗೆ ಮಸೀದಿಯಲ್ಲಿ ಒಬ್ಬಂಟಿಯಾಗಿ ಕುರಾನ್ ಪಠಿಸುತ್ತಿದ್ದಾಗ, ಅಪರಿಚಿತ ವ್ಯಕ್ತಿಗಳು-ತಮ್ಮ ಮುಖವನ್ನು ಬಟ್ಟೆಯಿಂದ ಮರೆಮಾಚಿಕೊಂಡು-ಮಸೀದಿಯೊಳಗೆ ನುಗ್ಗಿ ಇಮಾಮ್‌ರನ್ನು ಕುರಾನ್ ಓದುವಾಗ ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಆಗ್ರಹಿಸಿದ್ದಾರೆ.
ಇಮಾಮ್ ನಿರಾಕರಿಸಿದಾಗ, ಮೂವರು ಮುಸುಕುಧಾರಿ ದಾಳಿಕೋರರು ಅವರನ್ನು ಮಸೀದಿಯ ಹೊರಗೆ ಎಳೆದೊಯ್ದರು ಅಲ್ಲಿ ಅವರನ್ನು ಥಳಿಸಿದರು. ನಂತರ ದುಷ್ಕರ್ಮಿಗಳು, ರಾಸಾಯನಿಕ ಲೇಪಿತ ಬಟ್ಟೆಯನ್ನು ಬಳಸಿ ಅವರನ್ನು ಪ್ರಜ್ಞೆ ತಪ್ಪಿಸಿ ಗಡ್ಡವನ್ನು ಕತ್ತರಿಸಿದ್ದಾರೆ ಎಂದು ವರದಿಯಾಗಿದೆ.
ರಾತ್ರಿ 8 ಗಂಟೆ ಸುಮಾರಿಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಜನರು ಬಂದಾಗ ಖಾಜಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಮತ್ತು ಅವರನ್ನು ಸಿಲ್ಲೋಡ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಔರಂಗಾಬಾದ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ಸ್ಥಳಾಂತರಿಸಲಾಯಿತು ಎಂದು ವರದಿ ತಿಳಿಸಿದೆ.
ಮಾಹಿತಿ ಪಡೆದ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಆಗಮಿಸಿತು ಮತ್ತು ಪ್ರಾಥಮಿಕ ವಿಚಾರಣೆಯ ನಂತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೆಕ್ಷನ್ 452, 323 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.