-ಮೃತರನ್ನು ಜಮಾಲ್ ಎಂದು ಗುರುತಿಸಲಾಗಿದೆ
ಮೂಡಬಿದಿರೆ;ಯುವಕನೋರ್ವನಿಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಗಂಟಾಲ್ಕಟ್ಟೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಜಮಾಲ್ ಎಂದು ಗುರುತಿಸಲಾಗಿದೆ.ಮೃತ ಜಮಾಲ್ ನ ತಂಗಿಯ ಗಂಡ, ಚಿಕ್ಕಮಗಳೂರು ಮೂಲದ ಸುಹೈಬ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಜಮಾಲ್ ಮತ್ತು ಸುಹೈಬ್ ಮನೆ ಅಕ್ಕಪಕ್ಕದಲ್ಲಿದ್ದು ಸಣ್ಣ ಮಕ್ಕಳ ವಿಚಾರವಾಗಿ ಇಂದು ಬೆಳಗ್ಗೆ ಜಮಾಲ್ ಮತ್ತು ಸುಹೈಬ್ ನಡುವೆ ಮಾತಿನ ಚಕಮಕಿ ನಡೆದು ಜಮಾಲ್ ಹೊಟ್ಟೆಗೆ ಸುಹೈಬ್ ಚಾಕುವಿನಿಂದ ಇರಿದಿದ್ದಾನೆ ಎಂದು ಹೇಳಲಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ಜಮಾಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.ಈ ಕುರಿತು ಮೂಡುಬಿದಿರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಚುನಾವಣೋತ್ತರ ಸಮೀಕ್ಷೆ ಯಾವಾಗಲೂ ಶೇಕಡಾ 100ರಷ್ಟು ನಿಖರವಾಗಿ ಇರುವುದಿಲ್ಲ-ಸಿಎಂ ಬೊಮ್ಮಯಿ
ಹಾವೇರಿ: ಚುನಾವಣೋತ್ತರ ಸಮೀಕ್ಷೆ ಯಾವಾಗಲೂ ಶೇಕಡಾ 100ರಷ್ಟು ನಿಖರವಾಗಿ ಇರುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಶಿಗ್ಗಾಂವಿ ನಗರದ ತಮ್ಮ ಸ್ವಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಗಳು ನಮ್ಮ ಸಮೀಕ್ಷೆಗೆ ಹತ್ತಿರವಾಗಿವೆ. ಇನ್ನು ನಿಜ ಫಲಿತಾಂಶ ಹೊರ ಬೀಳುವಾಗ ಸಮೀಕ್ಷೆಯ ವರದಿಯಲ್ಲಿ ಹೆಚ್ಚು ಕಡಿಮೆ ಆಗುತ್ತದೆ. ರಾಜ್ಯದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಸಮೀಕ್ಷೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸುತ್ತದೆ. ಹಾಗಾಗಿ ಯಾವುದೇ ರೆಸಾರ್ಟ್ ರಾಜಕೀಯ ಮಾಡುವ ಪ್ರಶ್ನೆ ಇಲ್ಲ. ಶೇಕಡಾ ಮತದಾನದಲ್ಲೂ ಏರಿಕೆ ಕಂಡುಬಂದಿದೆ. ಗ್ರಾಮೀಣ ಭಾಗದಲ್ಲಿ ಯಾರು ಮತದಾನ ಮಾಡುತ್ತಿರಲಿಲ್ಲವೋ ಅವರೆಲ್ಲ ಬಂದು ಮತದಾನ ಮಾಡಿದ್ದಾರೆ. ಇದರಿಂದ ಬಿಜೆಪಿ ಅನುಕೂಲವಾಗಲಿದೆ ಎಂದು ಹೇಳಿದರು.