ಧಾರವಾಡ;ಧಾರವಾಡ ಹೊರವಲಯದ ಕಮಲಾಪುರದಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಬಾಜ್ ಹಂಚಿನಾಳ, ನದೀಮ್ ಹಾಗೂ ರಹೀಂ ಸೇರಿದಂತೆ ನಾಲ್ವರನ್ನು ಧಾರವಾಡದ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಬಳಿಕ ದಾಂಡೇಲಿಗೆ ಹೋಗಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ದಾಂಡೇಲಿಯಲ್ಲಿ ಪೊಲೀಸರ ಹುಡುಕಾಟ ನಡೆಸುವಾಗ ಆರೋಪಿಗಳು ಮುಂಡಗೋಡಕ್ಕೆ ಪರಾರಿಯಾಗಿದ್ದರು.ನಂತರ ಮುಂಡಗೋಡದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಧಾರವಾಡಕ್ಕೆ ಕರೆತಂದಿದ್ದಾರೆ.
ಕಮಲಾಪುರದಲ್ಲಿ ರಿಯಲ್ ಎಸ್ಟೆಟ್ ಉದ್ಯಮಿ ಮಹಮ್ಮದ್ ಕುಡಚಿ ಕೊಲೆ ನಡೆದಿತ್ತು.ಇದೇ ವೇಳೆ, ಒಬ್ಬ ವ್ಯಕ್ತಿಗೂ ಏಟು ತಾಗಿ ಓಡಿ ಹೋಗುವಾಗ ದಾರಿ ಮಧ್ಯೆಯೇ ಮೃತಪಟ್ಟಿದ್ದರು.ಕೊಲೆ ಮಾಡಿ ಆರೋಪಿಗಳು ರಾತ್ರಿಯೇ ಪರಾರಿಯಾಗಿದ್ದರು.
ಅರ್ಬಾಜ್ ಹಂಚಿನಾಳ ಈ ಹಿಂದೆ ಕೊಲೆಯಾಗಿರುವ ರೌಡಿ ಶೀಟರ ಫ್ರೂಟ್ ಇರ್ಫಾನ್ ಪುತ್ರರಾಗಿದ್ದಾರೆ. ಫ್ರೂಟ್ ಇರ್ಫಾನ್ ಹಿಂದೆ ಮಹಮ್ಮದ ಕುಡಚಿ ಜೊತೆ ರಿಯಲ್ ಎಸ್ಟೇಟ್ ಮಾಡುತ್ತಿದ್ದರು.
ಅರ್ಬಾಜ್, ಮೊಹಮ್ಮದ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಆಗಾಗ್ಗೆ ಈ ಸಂಬಂಧ ಇಬ್ಬರ ಮಧ್ಯೆ ಜಗಳ ಕೂಡ ನಡೆದಿತ್ತು.ಇದೇ ವೈಷಮ್ಯಕ್ಕೆ ಕುಡಚಿಯನ್ನು ಕೊಲೆ ಮಾಡಿರುವ ಬಗ್ಗೆ ಪ್ರಾಥಮಿಕವಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತ ರಮಣ ಗುಪ್ತಾ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲು ತನಿಖಾ ತಂಡಗಳನ್ನು ರಚನೆ ಮಾಡಿದ್ದರು.
ಧಾರವಾಡ ವಿದ್ಯಾನಗರ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು.ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.