ಬೆಂಗಳುರು;ಹಿಜಾಬ್ ನಿಷೇಧವನ್ನು ನೂತನ ಕಾಂಗ್ರೆಸ್ ಸರಕಾರ ತೆಗೆದು ಹಾಕಲಿದೆ ಎಂದು ರಾಜ್ಯದ ಏಕೈಕ ಮುಸ್ಲಿಂ ಮಹಿಳಾ ಶಾಸಕಿ ಕನೀಜ್ ಫಾತಿಮಾ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧ ಮಾಡಿತ್ತು. ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲು ಸಿದ್ಧವಾಗಿದ್ದು, ನಾವು ಮುಂಬರುವ ದಿನಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇನ್ನು ನಾವು ಆ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಪ್ರವೇಶ ನೀಡುತ್ತೇವೆ. ಅವರು ತಮ್ಮ ಪರೀಕ್ಷೆಗಳಿಗೆ ಹಾಜರಾಗಬಹುದು.ಹಿಜಾಬ್ ಇದಕ್ಕೆ ಸಮಸ್ಯೆಯಾಗುವುದಿಲ್ಲ. ಅವರು ಅಮೂಲ್ಯವಾದ ಎರಡು ವರ್ಷಗಳ ಸಮಯವನ್ನು ಕಳೆದುಕೊಂಡಿದ್ದಾರೆ ಎಂದು ಫಾತಿಮಾ ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.ರಾಜ್ಯದ 224 ವಿಧಾನಸಭಾ ಸ್ಥಾನಗಳಲ್ಲಿ 135 ಸ್ಥಾನಗಳನ್ನು ಗೆದ್ದುಕೊಂಡು ಸರಕಾರ ರಚನೆಗೆ ಮುಂದಾಗಿದೆ.ಬೊಮ್ಮಯಿ ಸರಕಾರದಲ್ಲಿನ ಓಲೈಕೆ ಆಡಳಿತದಿಂದ ಮುಸ್ಲಿಮರಿಗೆ ಅಭದ್ರತೆ ಅನುಭವವಾಗಿತ್ತು
ಇದರಿಂದ ಈ ಬಾರಿ ಅತ್ಯಧಿಕ ಮುಸ್ಲಿಮರ ಮತ ಕಾಂಗ್ರೆಸ್ ಗೆ ಬಿದ್ದಿದೆ.
ಇನ್ನು ಗುಲ್ಬರ್ಗ ಉತ್ತರ ಕ್ಷೇತ್ರದಲ್ಲಿ ಫಾತಿಮಾ ಅವರು ಬಿಜೆಪಿಯ ಚಂದ್ರಕಾಂತ್ ಬಿ ಪಾಟೀಲ್ ಅವರನ್ನು 2,712 ಮತಗಳಿಂದ ಸೋಲಿಸಿ ಎರಡನೇ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಪತಿ ಖಮರುಲ್ ಇಸ್ಲಾಂ ನಿಧನದ ಬಳಿಕ ಇವರು ಸಕ್ರಿಯ ರಾಜಕೀಯಕ್ಕೆ ಬಂದಿದ್ದರು.
ಹಿಜಾಬ್ ನಿಷೇಧದ ವೇಳೆ ಪ್ರತಿಭಟನೆಯಲ್ಲಿ ನಾನು ಹಿಜಾಬ್ ಧರಿಸಿಕೊಂಡೇ ವಿಧಾನಸೌಧ ಪ್ರವೇಶಿಸುತ್ತೇನೆ ತಾಕತ್ತಿದ್ದರೆ ತಡೆಯಿರಿ ಎಂದು ಫಾತಿಮಾ ಸವಾಲು ಹಾಕಿದ್ದರು.
ಇನ್ನು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿ ವಿವಾದಕ್ಕೆ ಕಾರಣವಾಗಿದ್ದ ಬಿಸಿ ನಾಗೇಶ್ ಗೆ ಈ ಬಾರಿ ತಿಪಟೂರಿನ ಜನ ಸೋಲಿನ ರುಚಿ ತೋರಿಸಿದ್ದಾರೆ.