ಚಾಮರಾಜನಗರ:ಸಚಿವ ವಿ.ಸೋಮಣ್ಣ ಅವರ ಆಡಿಯೋ ಲೀಕ್ ಆಗಿದ್ದು, ಜೆಡಿಎಸ್ ಅಭ್ಯರ್ಥಿಗೆ ನಾಮಪತ್ರ ಹಿಂಪಡೆಯಲು ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಪ್ರಕರಣ ದಾಖಲಾಗಿದೆ.
ಚುನಾವಣಾಧಿಕಾರಿಗಳು ನೀಡಿದಂತ ದೂರಿನ ಹಿನ್ನಲೆಯಲ್ಲಿ ಸಚಿವ ವಿ.ಸೋಮಣ್ಣ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿಯೊಂದಿಗೆ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ ಮಾತನಾಡಿರುವ ಆಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ನಾಮಪತ್ರ ಹಿಂಪಡೆಯಲು ಒಂದು ಗಂಟೆ ಮೊದಲು ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿಗೆ ಕರೆ ಮಾಡಿರುವಂತ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ವಿ.ಸೋಮಣ್ಣ ಅವರು, ಏಯ್ ಮೊದಲು ತಗೊಳ್ಳಯ್ಯ ಬಾಕಿದು ಆಮೇಲೆ ಏನು ಬೇಕಾದ್ರೂ ಮಾಡುತ್ತೇನೆ. ಅವನು ಯಾರೋ ಮಾತು ಕೇಳಿಕೊಂಡು, ನಾನು ಪೂರ್ತಿಯಾಗಿ ಮಾತನಾಡುವುದನ್ನು ಕೇಳು. ನೀನು ನನಗೆ ಒಬ್ಬ ಹಳೆಯ ಸ್ನೇಹಿತ. ಅವನ್ಯಾವನೋ ತೊಟ್ಟಿ ನನ್ಮಗನ ಮಾತು ಕೇಳೋದಕ್ಕೆ ಹೋಗಬೇಡ ಎಂದಿದ್ದರು.
ನಿನಗೆ ಬದುಕೋದಕ್ಕೆ ಏನು ಬೇಕೋ ಎಲ್ಲವನ್ನು ಮಾಡುತ್ತೇನೆ.ಅಣ್ಣ ಇದ್ದಾರೆ.ಮೊದಲು ವಾಪಾಸ್ಸು ತೆಗೆದುಕೋ.ಆಮೇಲೆ ಮಾತನಾಡುತ್ತೀನಿ. ನಿನ್ನ ಹಿತ ಕಾಪಾಡೋದು ನನ್ನ ಜವಾಬ್ದಾರಿ. ಈಗ ಉಪ್ಪಾರ ದೇವಸ್ಥಾನದಲ್ಲಿ ಇದ್ದೀನಿ. ನಾಮಪತ್ರ ವಾಪಾಸ್ಸು ತಗೋ, ಇರೋದು ಒಂದು ಗಂಟೆ. ಅವರು ಯಾರೋ ಮಾತು ಕೇಳಿ ಏನೇನೋ ಮಾಡಬೇಡ ಎಂದಿದ್ದರು.
ಏಯ್ ಮಲ್ಲು ಸರ್ಕಾರ ಬರ್ತದೆ, ಒಂದು ಗೂಟದ ಕಾರಿನ ವ್ಯವಸ್ಥೆ ಮಾಡುತ್ತೇನೆ. ನೀವು ಉಪ್ಪಾರು ಅಲ್ವಾ, ಉಪ್ಪರ ದೇವಸ್ಥಾನದಲ್ಲೇ ಇದ್ದೀನಿ. ಮೊದಲು ನಾಮಪತ್ರ ವಾಪಾಸ್ಸು ತೆಗೆದುಕೋ.ಜಿಟಿ ದೇವೇಗೌಡರು ನನ್ನ ಫ್ರೆಂಡ್ ಆಮೇಲೆ ಮಾತನಾಡುತ್ತೀನಿ.ಮೊದಲು ತೆಗೆದುಕೋ ಎಂದು ಹೇಳಿರುವ ಆಡಿಯೋ ವೈರಲ್ ಆಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಚಾಮರಾಜನಗರ ಫ್ಲೆಯಿಂಗ್ ಸ್ಕ್ವಾಡ್ ಅಧಿಕಾರಿಗಳು, ಸಚಿವ ವಿ.ಸೋಮಣ್ಣ, ನಟರಾಜ್ ಹಾಗೂ ಸುದೀಪ್ ಎಂಬುವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.