ಬೆಂಗಳೂರು:ರಾಜ್ಯದಲ್ಲಿ ನೂತನ ಸಚಿವರಾಗಿ 24 ಮಂದಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಅಚ್ಚರಿ ಎಂಬಂತೆ
ಎಂಎಲ್ಸಿಯೂ ಅಲ್ಲ, ಎಂಎಲ್ ಎಯೂ ಅಲ್ಲದ ಮಾಜಿ ಶಾಸಕ ಎನ್.ಎಸ್.ಬೋಸರಾಜು ಸಚಿವರಾಗಿದ್ದಾರೆ.
ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಬೋಸರಾಜು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಯಚೂರು ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬೋಸರಾಜುಗೆ ಟಿಕೆಟ್ ಕೊಟ್ಟಿರಲಿಲ್ಲ.ಅವರಿಗೆ ಹೈಕಮಾಂಡ್ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಿದೆ ಎನ್ನಲಾಗಿದೆ.
ಮೂಲತಃ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲೂರು ಗ್ರಾಮದವರಾದ ಎನ್.ಎಸ್.ಬೋಸರಾಜ್, ಕೃಷಿಕ ಕುಟುಂಬದಲ್ಲಿ ಜನಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಜೀನೂರು ಕ್ಯಾಂಪ್‌ನಲ್ಲಿ ತಮ್ಮ ಕೃಷಿ ಚಟುವಟಿಕೆಗಳನ್ನು ಆರಂಭಿಸಿದರು. ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆಯ ಬೃಹತ್ ಪ್ರಮಾಣದ ಉದ್ಯಮವಾಗಿಸುವ ಜೊತೆಗೆ ಎನ್.ಎಸ್.ಬೋಸರಾಜ್ ಅವರು ರಾಜಕೀಯ ಪ್ರವೇಶ ಮಾಡಿದ್ದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬೋಸರಾಜು ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಎನ್ ಎಸ್ ಬೋಸರಾಜು ಎಐಸಿಸಿ ಕಾರ್ಯದರ್ಶಿ, ತೆಲಂಗಾಣ ಕಾಂಗ್ರೆಸ್ ನ ಉಸ್ತುವಾರಿಯಾಗಿದ್ದಾರೆ.
ಇವರು ರಾಯಚೂರಿನ ಮಾನ್ವಿ ಕ್ಷೇತ್ರದಿಂದ 1999, 2004 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.ಕೆಪಿಸಿಸಿಯ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.ಪಕ್ಷದಲ್ಲಿ ವಿವಿಧ ಜವಾಬ್ಧಾರಿಯನ್ನು ನಿರ್ವಹಿಸಿದ್ದರು.
.
ಇವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ಇತರೆ ಜವಾಬ್ದಾರಿ ನಿರ್ವಹಿಸಿದ್ದರು.