ಕಾಸರಗೋಡು; ಚುನಾವಣಾ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸೇರಿ ನಾಲ್ವರಿಗೆ ಕಾಸರಗೋಡು ಜ್ಯುಡಿಶಿಯಲ್ ಫಸ್ಟ್ ಗ್ರೇಡ್ ನ್ಯಾಯಾಲಯ ಒಂದು ವರ್ಷ ಮೂರು ತಿಂಗಳ ಶಿಕ್ಷೆ ಮತ್ತು 20 ಸಾವಿರ ರೂ.ದಂಡ ವಿಧಿಸಿದೆ.
ಶಾಸಕ ಎ.ಕೆ.ಎಂ.ಅಶ್ರಫ್ ಜೊತೆಗೆ ಬಶೀರ್, ಅಬ್ದುಲ್ಲ, ಅಬ್ದುಲ್ ಖಾದರ್ ಶಿಕ್ಷೆಗೊಳಗಾದವರು. ನಾಲ್ವರು ಕೂಡ ಜಾಮೀನು ಪಡೆದಿದ್ದಾರೆ.
2010ರ ನವಂಬರ್ 25ರಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಪಟ್ಟಿಯಲ್ಲಿ ಓರ್ವನ ಹೆಸರು ಸೇರ್ಪಡೆಗೆ ಅರ್ಜಿಯಲ್ಲಿ ಕೆಲ ಲೋಪ ಇರುವುದಾಗಿ ಅಧಿಕಾರಿಗಳು ತೆಗೆದಿರಿಸಿದ್ದರು. ಅರ್ಜಿಯನ್ನು ತೆಗೆದಿರಿಸಿದ್ದನ್ನು ಅಶ್ರಫ್ ಸೇರಿದಂತೆ ನಾಲ್ವರು ಪ್ರಶ್ನಿಸಿದ್ದು, ಮಾತಿನ ಚಕಮಕಿ ನಡೆದಿತ್ತು. ಅಲ್ಲದೆ ಉಪ ತಹಶೀಲ್ದಾರ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದ್ದಾರೆ. ಇದು ಅನಿರೀಕ್ಷಿತ ತೀರ್ಪು ಆಗಿದ್ದು, 13 ವರ್ಷಗಳ ಹಳೆಯ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಇಂದು ತೀರ್ಪು ನೀಡಲಾಗಿದೆ. ಈ ಬಗ್ಗೆ ಪರಿಶೀಲಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಅಶ್ರಫ್ ತಿಳಿಸಿದ್ದಾರೆ.