ಮಣಿಪುರ:ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರವಾಗಿ ಮೆರವಣಿಗೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಹುಯಿರೆಮ್ ಹೆರೋದಾಸ್ ಮೈತೆಯ್ ಮನೆಗೆ ಪ್ರತಿಭಟನಾಕಾರರ ಗುಂಪೊಂದು ಬೆಂಕಿ ಹಚ್ಚಿರುವ ಬಗ್ಗೆ ವರದಿಯಾಗಿದೆ.
ಹಿಂಸಾಚಾರ ಪೀಡಿತ ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಗಿತ್ತು.
ಈ ವೇಳೆ ಮಹಿಳೆಯರ ಮೇಲೆ ಗ್ಯಾಂಗ್ ರೇಪ್ ಕೂಡ ಮಾಡಲಾಗಿದೆ ಎನ್ನಲಾಗಿದೆ.ಈ ವಿಡಿಯೋ ಈಗ ವೈರಲ್ ಆಗಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.ಈ ನಡುವೆ ಓರ್ವ ಆರೋಪಿಯ ಮನೆಗೆ ಗ್ರಾಮಸ್ಥರು ಸೇರಿ ಬೆಂಕಿ ಹಚ್ಚಿರುವ ಬಗ್ಗೆ ವರದಿಯಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ವಯಂಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡ ಮಣಿಪುರ ಪೊಲೀಸರು ಬುಧವಾರ ರಾತ್ರಿ ಅಪರಿಚಿತ ವ್ಯಕ್ತಿಗಳ ವಿರುದ್ಧ ತೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.