ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ವಿಡಿಯೋ ವೈರಲ್, ಗ್ಯಾಂಗ್ ರೇಪ್ ಮಾಡಿರುವ ಬಗ್ಗೆಯೂ ಆರೋಪ
ಇಂಫಾಲ:ಮಣಿಪುರದಲ್ಲಿ ಪುರುಷರ ಗುಂಪು ಇಬ್ಬರು ಮಹಿಳೆಯರನ್ನು ರಸ್ತೆಯ ಮೇಲೆ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಭಯಾನಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಭಾರೀ ಖಂಡನೆ ಮತ್ತು ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
ಗದ್ದೆಯೊಂದರಲ್ಲಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಬುಡಕಟ್ಟು ಸಂಘಟನೆಯೊಂದು ಆರೋಪಿಸಿದೆ.
ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ಹೇಳಿಕೆಯ ಪ್ರಕಾರ, ರಾಜ್ಯ ರಾಜಧಾನಿ ಇಂಫಾಲ್‌ನಿಂದ ಸುಮಾರು 35 ಕಿಮೀ ದೂರದಲ್ಲಿರುವ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಈ ಘಟನೆ ಸಂಭವಿಸಿದೆ. ಕಾಂಗ್‌ಪೋಪಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದ್ದರೂ ಮತ್ತೊಂದು ಜಿಲ್ಲೆಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಮಹಿಳೆಯನ್ನು ಆಕ್ರೋಶಿತ ಹಾಗೂ ಕಿಡಿಗೇಡಿಗಳ ಗ್ಯಾಂಗ್ ಬೆತ್ತಲೆಗೊಳಿಸಿದೆ. ಬಳಿಕ ಗಲಭೆಕೋರರು ದಾರಿಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಮೆರವಣಿಗೆ ವೇಳೆ ಮಹಿಳೆಯರು ಕಣ್ಣೀರಿಡುತ್ತಾ ಪರಿ ಪರಿಯಾಗಿ ಬೇಡಿಕೊಂಡರು ಆಕ್ರೋಶಿತರು ಕೇಳಿಸಿಕೊಂಡಿಲ್ಲ. ಇದರ ಬದಲು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ.
ಬೆತ್ತಲೆಗೊಳಿಸಿದ ಮಹಿಳೆಯರ ಮೇಲೆ ಆಕ್ರೋಶಿತರ ಗುಂಪು ಗ್ಯಾಂಗ್ ರೇಪ್ ಮಾಡಿದೆ ಎಂದು ಬುಡಕಟ್ಟು ಸಮುದಾಯ ಆರೋಪಿಸಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮತ್ತೆ ಅಶಾಂತಿಯ ಭೀತಿ ಶುರುವಾಗಿದೆ.
ಮಣಿಪುರದಲ್ಲಿ ಸತತ ಪ್ರಯತ್ನಗಳ ಬಳಿಕ ಸುದೀರ್ಘ ಹಿಂಸಾಚಾರ ಒಂದು ಹಂತಕ್ಕೆ ತಣ್ಣಗಾಗಿತ್ತು.
ನಾವು ಆರೋಪಿಗಳನ್ನು ಗುರುತಿಸಿದ್ದೇವೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂದು NDTV ಗೆ ತಿಳಿಸಿದ್ದಾರೆ. ಮೇ 4 ರಂದು ನಡೆದ ಘಟನೆ ಬಳಿಕ ಬದುಕುಳಿದವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಓರ್ವ ಅಧಿಕಾರಿ ಹೇಳಿದರು. ನಮಗೆ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ. ನಾವು ಒಂದು ಅಥವಾ ಎರಡು ದಿನಗಳಲ್ಲಿ ಅವರನ್ನು ಬಂಧಿಸುತ್ತೇವೆ ಎಂದು ಅಧಿಕಾರಿ ಹೇಳಿದ್ದಾರೆ.