ಮಂಗಳೂರು; ಪುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಕಾರು ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಭಯಾನಕ ಘಟನೆ ಮಂಗಳೂರಿನ ಲೇಡಿಹಿಲ್ ನಲ್ಲಿ ನಡೆದಿದೆ.
ಯುವತಿಯರು ಲೇಡಿಹಿಲ್ ನಲ್ಲಿ ಫುಟ್ ಬಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇಯಾನ್ ಕಾರು ಏಕಾಏಕಿ ಫುಟ್ ಪಾತ್ ಮೇಲೆ ನುಗ್ಗಿ ಸುಮಾರು ಐದು ಮಂದಿಗೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರೂಪಶ್ರೀ(23) ಎಂಬ ಯುವತಿ ಸಾವನ್ನಪ್ಪಿದ್ದು, ಸ್ವಾತಿ (26), ಹಿತನ್ವಿ (16), ಕಾರ್ತಿಕಾ (16), ಯತಿಕಾ (12) ಎಂಬುವವರು ಗಾಯಗೊಂಡಿದ್ದಾರೆ.
ಘಟನೆಯಾಗುತ್ತಿದ್ದಂತೆ ಕಾರು ಚಾಲಕ ಸ್ಥಳದಲ್ಲಿ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಆ ಬಳಿಕ ತಂದೆಯ ಜೊತೆ ಠಾಣೆಗೆ ಬಂದು ಶರಣಾಗಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿ ಅಭಿಷೇಕ್, ಸಂಜೆ ನಾಲ್ಕು ಗಂಟೆಯ ವೇಳೆಗೆ ಘಟನೆ ನಡೆದಿದೆ.
ನಾನು ಅಂಗಡಿಯ ಎದುರಲ್ಲೇ ಕೂತಿದ್ದೆ,ಅಂಗಡಿಯ ಮುಂದೆ ನಾಲ್ವರು ಹೋಗುತ್ತಿದ್ದರು. ಹಿಂಬಂದಿಯಿಂದ ಬಂದ ಕಾರು ಏಕಾಏಕಿ ಅವರಿಗೆ ಡಿಕ್ಕಿ ಹೊಡೆಯಿತು. ಕಾರ್ ಡ್ರೈವರ್ ತುಂಬಾ ವೇಗವಾಗಿ ಕಾರು ಚಾಲನೆ ಮಾಡಿದ್ದ, ಡಿಕ್ಕಿ ಹೊಡೆದ ರಭಸಕ್ಕೆ ಸ್ಪಾಟ್ ನಲ್ಲೇ ಯುವತಿ ಸಾವನ್ನಪ್ಪಿದರು. ರಸ್ತೆಯಲ್ಲಿ ಬರುತ್ತಿದ್ದ ಮಹಿಳೆಗೂ ಹಾಗೂ ದಸರಾಗಾಗಿ ಅಳವಡಿಸಿದ್ದ ಕಂಬಕ್ಕೂ ಕಾರು ಡಿಕ್ಕಿಯಾಗಿತ್ತು ಎಂದು ತಿಳಿಸಿದ್ದಾರೆ.
ಅಪಘಾತ ನಡೆದ ಬಳಿಕ ಸ್ಥಳದಿಂದ ಕಾರು ಸಮೇತ ಪರಾರಿಯಾಗಿದ್ದ ಚಾಲಕ ಕಮಲೇಶ್ ಬಲದೇವ್ ಕಾರನ್ನು ಹೋಂಡಾ ಶೋ ರೂಂ ಬಳಿ ನಿಲ್ಲಿಸಿ ಮನೆಗೆ ಹೋಗಿದ್ದಾನೆ. ಬಳಿಕ ತಂದೆ ಹೆಚ್‌ಎಂ ಬಲದೇವ್ ಅವರೊಂದಿಗೆ ಪಶ್ಚಿಮ ಸಂಚಾರಿ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.