ಕಳೆದ 3 ತಿಂಗಳಲ್ಲಿ 242 ಭ್ರೂಣ ಹತ್ಯೆ; ವೈದ್ಯರು, ಆಸ್ಪತ್ರೆಗಳು ಶಾಮೀಲು!

ಬೆಂಗಳೂರು;ಕಳೆದ 3 ತಿಂಗಳ ಅವಧಿಯಲ್ಲಿ ಸುಮಾರು 242 ಭ್ರೂಣ ಹತ್ಯೆ ನಡೆದಿದೆ ಹಾಗೂ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆಸಿರುವುದು ತಿಳಿದು ಬಂದಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಆರೋಪಿಗಳು ಒಂದೂವರೆ ಸಾವಿರಕ್ಕೂ ಅಧಿಕ ಭ್ರೂಣ ಹತ್ಯೆ ಮಾಡಿಸಿರುವ ಸಂಚು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಆರೋಪಿಗಳ ಪೈಕಿ ಭ್ರೂಣ ಲಿಂಗ ಪತ್ತೆಗೆ ಒಂದು ತಂಡ, ಹತ್ಯೆಗೆ ಮತ್ತೊಂದು ತಂಡ ಕೆಲಸ ಮಾಡಿದ್ದು, ಆರೋಪಿಗಳ ಕರೆ ವಿವರಗಳನ್ನು ಕಲೆಹಾಕಿದಾಗ ವೈದ್ಯರು ಸೇರಿದಂತೆ ಅನೇಕರ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ.

ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದವರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದು, ಪ್ರಕರಣ ಬಯಲಾಗುತ್ತಿದ್ದಂತೆ ಅನೇಕರು ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂಬುದು ತಿಳಿದು ಬಂದಿದೆ. ಆರೋಪಿಗಳು ವ್ಯವಸ್ಥಿತವಾಗಿ ಜಾಲ ರೂಪಿಸಿಕೊಂಡು ದುಷ್ಕೃತ್ಯ ಎಸಗುತ್ತಿದ್ದು, ಪ್ರಕರಣದಲ್ಲಿ ಇಲ್ಲಿಯವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಮೂಲತಃ ಮೈಸೂರು ಹಾಗೂ ಮಂಡ್ಯದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯದ ಆಲೆಮನೆ, ಮೈಸೂರು ಹಾಗೂ ಬೆಂಗಳೂರಿನ ಬೈಯಪ್ಪನಹಳ್ಳಿಯ ಆಸ್ಪತ್ರೆಗಳಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡುತ್ತಿದ್ದರು.ಮಧ್ಯವರ್ತಿಗಳ ಮೂಲಕ ಮಹಿಳೆಯರನ್ನು ಕರೆ ತರಲಾಗುತ್ತಿತ್ತು. ಒಂದು ಭ್ರೂಣ ಹತ್ಯೆಗೆ 20 ಸಾವಿರ ರೂಪಾಯಿನಂತೆ ಪಡೆದು ಕೃತ್ಯ ಎಸಗುತ್ತಿದ್ದರು
ಹೆಣ್ಣು ಭ್ರೂಣ ಪತ್ತೆ, ಹಾಗೂ ಗರ್ಭಪಾತ ಮಾಡಿಸುತ್ತಿದ್ದ ಜಾಲದ ಕುರಿತು ಮಾಹಿತಿ ಪಡೆದಿದ್ದ ಬೈಯಪ್ಪನಹಳ್ಳಿ ಪೊಲೀಸರು ಕಳೆದ ಅಕ್ಟೋಬರ್‌ನಲ್ಲಿ ಶಿವನಂಜೇಗೌಡ, ವೀರೇಶ್,ನವೀನ್ ಕುಮಾರ್ ಮತ್ತು ನಯನ್ ಕುಮಾರ್ ಎಂಬುರನ್ನು ಬಂಧಿಸಿದ್ದರು.

ಬಂಧಿತ ಆರೋಪಿಗಳು ಗರ್ಭಿಣಿಯರನ್ನು ಗುರುತಿಸಿಕೊಂಡು ಮಂಡ್ಯದ ಆಲೆಮನೆಯೊಂದರಲ್ಲಿ ಸ್ಕ್ಯಾನ್ ಮಾಡಿಸುತ್ತಿದ್ದರು. ಬಳಿಕ ಹೆಣ್ಣು ಭ್ರೂಣವಾದರೆ ಗರ್ಭಪಾತ ಮಾಡಿಸುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿತ್ತು.

ಟಾಪ್ ನ್ಯೂಸ್