ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್? ಕೆಲವೇ ದಿನಗಳಲ್ಲಿ ನಡೆಯಲಿದೆಯಾ ಹೈಡ್ರಾಮ? ಕಾಂಗ್ರೆಸ್ ನಾಯಕ ಹೇಳಿದ್ದೇನು ಗೊತ್ತಾ?

ಮಹಾರಾಷ್ಟ್ರ;ಆಗಸ್ಟ್‌ 10ರ ಸುಮಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿರುವ ಶಿವಸೇನೆಯ ಏಕನಾಥ ಶಿಂದೆ ಅವರ ಬದಲಿಗೆ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರು ಮುಖ್ಯಮಂತ್ರಿಯಾಗಬಹುದು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪೃಥ್ವಿರಾಜ್‌ ಚವಾಣ್‌ ಭವಿಷ್ಯ ನುಡಿದಿದ್ದಾರೆ.
ಸಿಎಂ ಶಿಂದೆ ಮತ್ತು ಶಿವಸೇನೆಯ ಇತರ 15 ಶಾಸಕರ ಅನರ್ಹತೆ ಬಗ್ಗೆ ಆಗಸ್ಟ್‌ 10ರ ಸುಮಾರಿಗೆ ನಿರ್ಧಾರವಾಗಲಿದೆ
ನಂತರ ಹಾಲಿ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಮುಖ್ಯಮಂತ್ರಿಯಾಗಿ ನೇಮಕವಾಗಬಹುದು ಎಂದು ಪೃಥ್ವಿರಾಜ್‌ ಚವಾಣ್‌ ಪ್ರಾದೇಶಿಕ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಶಿಂದೆ ತನ್ನ ತವರು ಜಿಲ್ಲೆ ಥಾಣೆಯ ಹೊರಗೆ ಯಾವುದೇ ಪ್ರಭಾವನ್ನು ಹೊಂದಿಲ್ಲದ ಕಾರಣ ಅವರ ನೇತೃತ್ವದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಉತ್ಸುಕವಾಗಿಲ್ಲ. ಬಿಜೆಪಿಗೆ ಈಗ ಅಜಿತ್‌ ಪವಾರ್ ಅವರ ಅಗತ್ಯ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಅಜಿತ್‌ ಪವಾರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಚುನಾವಣೆಯನ್ನು ಎದುರಿಸಲು ಬಿಜೆಪಿ ಬಯಸುತ್ತಿದೆ. ಇದು ಶಿಂದೆಯವರ ಭವಿಷ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರದ್ದು ಬಳಸಿ ಬೀಸಾಡುವ ಕಾರ್ಯಶೈಲಿಯಾಗಿದೆ ಎಂದು ಚವಾಣ್‌ ಆರೋಪಿಸಿದ್ದಾರೆ.

ಅಜಿತ್‌ ಪವಾರ್ ಸೇರಿದಂತೆ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಎಂಟು ಶಾಸಕರು ಜುಲೈ 2 ರಂದು ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದರು.ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾಗಿ ಹಾಗೂ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಟಾಪ್ ನ್ಯೂಸ್