ಮಧ್ಯಪ್ರದೇಶದಲ್ಲಿ 5 ಗ್ಯಾರೆಂಟಿಗಳನ್ನು ಘೋಷಿಸಿದ ಪ್ರಿಯಾಂಕ ಗಾಂಧಿ; ಗ್ಯಾರೆಂಟಿಯಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ…

ಜಬಲ್ಪುರ; ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು ಮತ್ತು ರಾಜ್ಯದ ಜನರಿಗೆ ಐದು ಭರವಸೆಗಳನ್ನು ಘೋಷಿಸಿದರು.

ಅವರು ಜಬಲ್ಪುರ ಜಿಲ್ಲೆಯಲ್ಲಿ ಚುನಾವಣಾ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಐದು ಖಾತರಿಗಳ ಕುರಿತು ಮಾತನಾಡಿದ ಶ್ರೀಮತಿ ಪ್ರಿಯಾಂಕ ಗಾಂಧಿ, ರಾಜ್ಯದ ಪ್ರತಿ ಮಹಿಳೆಗೆ ಮಾಸಿಕ 1,500 ರೂ. ಸಹಾಯಧನ, ಪ್ರತಿ ಮನೆಗೆ 500 ರೂ.ಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್, 100 ಯೂನಿಟ್ ವಿದ್ಯುತ್ ಉಚಿತ ಮತ್ತು 200 ಯೂನಿಟ್ ಅರ್ಧ ಬೆಲೆಯಲ್ಲಿ ನೀಡಲಾಗುವುದು. ರೈತರ ಸಾಲ ಮನ್ನಾ ಮಾಡಿ ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

ನಾವು ನರ್ಮದೆಯ ದಡಕ್ಕೆ ಬಂದಿದ್ದೇವೆ, ನಾವು ಸುಳ್ಳು ಹೇಳುವುದಿಲ್ಲ ಎಂದು ಇದೆ ವೇಳೆ ಅವರು ಹೇಳಿದರು.

ಭಾರತೀಯ ಜನತಾ ಪಕ್ಷವನ್ನು ಟೀಕಿಸಿದ ಅವರು, ಬಿಜೆಪಿ ಇಲ್ಲಿಗೆ ಬಂದು ಘೋಷಣೆಗಳನ್ನು ಮಾಡುತ್ತಾರೆ, ಆದರೆ ಅವುಗಳನ್ನು ಈಡೇರಿಸುವುದಿಲ್ಲ, ಅವರು ಡಬಲ್ ಎಂಜಿನ್ ಮತ್ತು ಟ್ರಿಪಲ್ ಎಂಜಿನ್ ಬಗ್ಗೆ ಮಾತನಾಡುತ್ತಾರೆ. ಅವರು ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಅದನ್ನೇ ಹೇಳುತ್ತಿದ್ದರು. ಆದರೆ ಸಾರ್ವಜನಿಕರು ಡಬಲ್ ಎಂಜಿನ್ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೆಲಸ ಮಾಡಲು ಪ್ರಾರಂಭಿಸಬೇಕು ಎಂದು ಅವರಿಗೆ ತೋರಿಸಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷ ಭರವಸೆ ನೀಡಿ ಛತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದಲ್ಲಿ ಈಡೇರಿಸಿದ್ದೇವೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸ್ಥಿತಿ ನೋಡಿ ನಿಮಗೆ ಅರಿವಾಗುತ್ತದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಸಾಕಷ್ಟು ಕೆಲಸ ಮತ್ತು ಅಭಿವೃದ್ಧಿಯನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಬಿಜೆಪಿ ಕುದುರೆ ವ್ಯಾಪಾರದ ಮೂಲಕ ಸರ್ಕಾರವನ್ನು ಮುರಿದು ಸರ್ಕಾರ ರಚಿಸಿತ್ತು. ಹಣ ಬಲದ ಆಧಾರದಲ್ಲಿ ಜನಾದೇಶವನ್ನು ಹತ್ತಿಕ್ಕಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ.

ಟಾಪ್ ನ್ಯೂಸ್