22 ವರ್ಷದ ಯುವಕನನ್ನು ತಲೆ ಕಡಿದು ನರಬಲಿ ನೀಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ಗುರುವಾರ ನಡೆದಿದೆ.
ನರಸಿಂಗ್‌ಪುರದಲ್ಲಿ ಅಂಕಿತ್ ಕೌರವ್(22) ಎಂಬ ಯುವಕನನ್ನು ಶಿರಚ್ಛೇದ ಮಾಡಿದ ಆರೋಪದ ಮೇಲೆ ಮಧ್ಯಪ್ರದೇಶ ಪೊಲೀಸರು ಇಬ್ಬರು ತಂತ್ರಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸುರೇಂದ್ರ ಕಚಿ(40) ಮತ್ತು ರಾಮು ಕಚಿ (45) ಎಂದು ಗುರುತಿಸಲಾಗಿದೆ.
ಸಾವಿಗೆ 2 ವಾರಗಳ ಮೊದಲು ಅಂಕಿತ್ ಕೌರವ್ ಕುಟುಂಬವು ಆರ್ಥಿಕ ತೊಂದರೆಗಳನ್ನು ಎದುರಿಸಿತ್ತು. ಈ ವೇಳೆ ತಂತ್ರಿಗಳ ಸಹಾಯ ಪಡೆಯಲು ಕೌರವ್ ಮುಂದಾಗಿದ್ದಾನೆ. ಅವರು ಆತನಿಗೆ ಸಹಾಯ ಮಾಡಲು ಒಪ್ಪಿಕೊಂಡರು ಮತ್ತು ಆತನ ಬಲಗೈಯಿಂದ ಮಧ್ಯದ ಬೆರಳನ್ನು ಕತ್ತರಿಸುವಂತೆ ಮನವೊಲಿಸಿದ್ದಾರೆ.
ಟೇಕಪುರ ಗ್ರಾಮಕ್ಕೆ ಕೌರವ್‌ನನ್ನು ಕರೆದೊಯ್ದಿದ್ದು, ಆರೋಪಿಗಳು ಆತನಿಗೆ ನಿದ್ರೆ ಮಾತ್ರೆಗಳನ್ನು ನೀಡಿ ಬಳಿಕ ಹರಿತವಾದ ಆಯುಧದಿಂದ ಆತನ ರುಂಡವನ್ನು ಕತ್ತರಿಸಿದ್ದಾರೆ. ಬೆರಳು, ಕೈಗಳನ್ನು ಕೂಡ ಕತ್ತರಿಸಿದ್ದಾರೆ.
ಪೊಲೀಸರು ತಮ್ಮ ತನಿಖೆಯ ಸಮಯದಲ್ಲಿ ಘಟನೆ ನಡೆದ ರಾತ್ರಿ ಸಂತ್ರಸ್ತ ಆರೋಪಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿರುವುದನ್ನು ಕಂಡುಕೊಂಡಿದ್ದಾರೆ. ಸಿಹೋರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಯುವಕ ಅಂಕಿತ್ ಕೌರವನ ಕುಟುಂಬದ ಸದಸ್ಯರ ಚಿಕಿತ್ಸೆಗಾಗಿ ಹಣದ ಅವಶ್ಯಕತೆಯಿತ್ತು. ಅಸಹಾಯಕರಾದ ಕುಟುಂಬವು ತಂತ್ರಿ ಸುರೇಂದ್ರ ಕಚಿ ಅವರ ಸಹಾಯವನ್ನು ಕೋರಿದ್ದಾರೆ. ಈ ವೇಳೆ ಅವರು ಹಣ ಬರುವ ಧಾರ್ಮಿಕ ಕ್ರಿಯೆಗಳನ್ನು ಮಾಡಲು ಸೂಚಿಸಿದ್ದಾರೆ. ಅಂಕಿತ್‌ಗೆ ಬೆರಳನ್ನು ತ್ಯಾಗ ಮಾಡುವಂತೆ ಸೂಚಿಸಿದ್ದಾರೆ. ನಂತರ ನ.3 ರಂದು ಧಾರ್ಮಿಕ ಕ್ರಿಯೆಯನ್ನು ನಿಗದಿಪಡಿಸಿ ತಂತ್ರಿ ಪ್ರಸಾದದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಅಂಕಿತ್‌ಗೆ ನೀಡಿದ್ದಾನೆ. ಪ್ರಜ್ಞೆ ಕಳೆದುಕೊಂಡ ಅಂಕಿತ್ ತಲೆಯನ್ನು ಕೊಡಲಿಯಿಂದ ಕತ್ತರಿಸಿ, ಬೆರಳುಗಳನ್ನು ಬೇರ್ಪಡಿಸಲಾಗಿದೆ ಎಂದು ಹೇಳಿದ್ದಾರೆ.
ಅಂಕಿತ್‌ನ ಕುಟುಂಬಸ್ಥರು ಆತನ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 201, 120 (ಬಿ) ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.