ಬೆಳಗಾವಿ:ಆಟವಾಡುವಾಗ ಹೈಟೆನ್ಶನ್ ವೈರ್ ಸ್ಪರ್ಶಿಸಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಮಚ್ಛೆ ಗ್ರಾಮದ ಬಳಿಯಲ್ಲಿ ನಡೆದಿದೆ.
ಮಧುರಾ ಎಂಬ ಬಾಲಕಿ ಆಟವಾಡುತ್ತಿದ್ದಾಗ ಮನೆ ಮುಂದಿನ ಹೈಟೆನ್ಷನ್ ವೈಯರ್ ತಾಗಿ ಮೃತಪಟ್ಟಿದ್ದಾಳೆ. ಮನೆಯ ಮುಂಭಾಗವೇ ವಿದ್ಯುತ್ ತಂತಿ ಹಾದುಹೋಗಿದ್ದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಹೈಟೆನ್ಶನ್ ವೈರ್ ಹಾದುಹೋಗಿದ್ದರಿಂದ ಮನೆ ಕಟ್ಟದಂತೆ ಹೆಸ್ಕಾಂ ಅಧಿಕಾರಿಗಳು ಈ ಹಿಂದೆಯೇ ನೋಟಿಸ್ ಜಾರಿ ಮಾಡಿದ್ದರು. ಆದರೂ ನಿರ್ಲಕ್ಷ್ಯ ವಹಿಸಿ ಬಾಲಕಿ ಕುಟುಂಬಸ್ಥರು ಮನೆಯನ್ನು ನಿರ್ಮಿಸಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸದ್ಯ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.