ಮದರಸಾದಲ್ಲಿ ಸಂಸ್ಕೃತ ಬೋಧನೆಗೆ ಮುಂದಾದ ಸರಕಾರ
ಉತ್ತರಾಖಂಡ;ಮದರಸಾದಲ್ಲಿ ಮಕ್ಕಳಿಗೆ ಸಂಸ್ಕೃತವನ್ನು ಬೋಧಿಸಲು ಕ್ರಮಕೈಗೊಳ್ಳಲಾಗುವುದು ಎಂದು ವಕ್ಫ್ ಮಂಡಳಿಯ ಅಧ್ಯಕ್ಷ ಶಾದಾಬ್ ಶಾಮ್ಸ್ ಹೇಳಿದ್ದಾರೆ.
ಉತ್ತರಾಖಂಡದ ವಕ್ಫ್ ಮಂಡಳಿಯ ಅಧ್ಯಕ್ಷ ಶಾದಾಬ್ ಶಾಮ್ಸ್ ಈ ಕುರಿತು ಹೇಳಿಕೆ ನೀಡಿದ್ದು, ಸಾಂಪ್ರದಾಯಿಕ ಮದರಸಾ ಶಿಕ್ಷಣದ ಮಿತಿಯಿಂದ ಹೊರ ಬಂದು ಮಕ್ಕಳ ಭವಿಷ್ಯಕ್ಕಾಗಿ ಸಮಕಾಲೀನ ಪ್ರಪಂಚದ ಸವಾಲುಗಳನ್ನು ಎದುರಿಸಲು ಇದು ಒಳ್ಳೆಯದು ಎಂದು ಹೇಳಿದ್ದಾರೆ.
ಎಪಿಜೆ ಅಬ್ದುಲ್ ಕಲಾಂ ಅವರಂತಹ ಸ್ಪೂರ್ತಿದಾಯಕ ವ್ಯಕ್ತಿಗಳ ಹಾದಿಯಲ್ಲಿ ಮಕ್ಕಳು ನಡೆಯಲು ಈ ಕ್ರಮವು ಅನುವು ಮಾಡಿಕೊಡುತ್ತದೆ. ಈ ಕುರಿತು ಮಕ್ಕಳಿಗೆ ಶಿಕ್ಷಣ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ ಎಂದು ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.
ಉತ್ತರಾಖಂಡದ ದೇವಭೂಮಿಯಲ್ಲಿ ಸಂಸ್ಕೃತವನ್ನು ಕಲಿಸದಿದ್ದರೆ, ಅದನ್ನು ಎಲ್ಲಿ ಕಲಿಸಲಾಗುತ್ತದೆ? ವಿದ್ಯಾರ್ಥಿಗಳು ಪ್ರತಿಯೊಂದು ಭಾಷೆ ಮತ್ತು ಸಂಸ್ಕೃತಿಯ ಜ್ಞಾನವನ್ನು ಹೊಂದಿರಬೇಕು. ಮದರಸಾಗಳಲ್ಲಿ ಶಿಕ್ಷಣವು ಸೀಮಿತವಾಗಿರಬಾರದು. ಮುಸ್ಲಿಂ ಮಕ್ಕಳಿಗೆ ಎಲ್ಲವನ್ನೂ ಅಧ್ಯಯನ ಮಾಡುವ ಹಕ್ಕಿದೆ ಎಂದು ಅವರು ಹೇಳಿದರು.
ಮದರಸಾಗಳ ಶಿಕ್ಷಣ ವ್ಯವಸ್ಥೆಯ ಆಧುನೀಕರಣದ ಕುರಿತು ಮಾತನಾಡಿದ ಶಾಮ್ಸ್, ಪಠ್ಯಕ್ರಮವು ವೈಜ್ಞಾನಿಕ ಕಲಿಕೆ ಮತ್ತು ಇಸ್ಲಾಮಿಕ್ ಅಧ್ಯಯನಗಳ ಸಮ್ಮಿಲನವಾಗಿದೆ ಎಂದು ಹೇಳಿದರು
ಉತ್ತರಾಖಂಡದ ವಕ್ಫ್ ಮಂಡಳಿಯು ರಾಜ್ಯದ 117 ವಕ್ಫ್ ಬೋರ್ಡ್ ಮದರಸಾದಲ್ಲಿ NCERT ಪಠ್ಯಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದೆ. NCERT ಪಠ್ಯಕ್ರಮವು ಸಂಸ್ಕೃತವನ್ನೂ ಒಳಗೊಂಡಿದೆ ಎಂದು ಶಮ್ಸ್ ಹೇಳಿದರು.