ಮದ್ರಸಾಗಳ ಬಗ್ಗೆ ಪರಿಶೀಲನೆಗೆ ಸರಕಾರದಿಂದ ಸೂಚನೆ; ಉತ್ತರಪ್ರದೇಶ, ಅಸ್ಸಾಂ ಬಳಿಕ ಮತ್ತೊಂದು ರಾಜ್ಯದಲ್ಲಿ ಬೆಳವಣಿಗೆ
ಮಧ್ಯಪ್ರದೇಶ; ಮದ್ರಸಾ ಅಥವಾ ಇಸ್ಲಾಮಿಕ್ ಧಾರ್ಮಿಕ ಶಾಲೆಗಳ ಮರುಪರಿಶೀಲನೆಗೆ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶ, ಅಸ್ಸಾಂ ಬಳಿಕ ಮದ್ರಸಾ ಅಥವಾ ಇಸ್ಲಾಮಿಕ್ ಧಾರ್ಮಿಕ ಶಾಲೆಗಳ ಮರುಪರಿಶೀಲನೆಗೆ ಆದೇಶ ನೀಡಿದ ಮೂರನೇ ರಾಜ್ಯ ಮಧ್ಯಪ್ರದೇಶವಾಗಿದೆ.
ಮೂಲಭೂತವಾದವನ್ನು ಕಲಿಸುತ್ತಿರುವ ಮಧ್ಯಪ್ರದೇಶದ ಅಕ್ರಮ ಮದರಸಾಗಳು ಮತ್ತು ಸಂಸ್ಥೆಗಳನ್ನು ಪರಿಶೀಲಿಸಬೇಕು ಎಂದು ಶಿವರಾಜ್ ಸಿಂಗ್ ಚೌಹಾಣ್ ಎಲ್ಲಾ 52 ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ಬುಧವಾರ ಕಾನೂನು ಸುವ್ಯವಸ್ಥೆ ಪರಿಶೀಲನೆ ವೇಳೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಕುರಿತು ಹೇಳಿಕೆ ನೀಡಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸುವಾಗ’ರಾಜ್ಯದ ಅಕ್ರಮ ಮದರಸಾಗಳು, ಮತಾಂಧತೆಯನ್ನು ಕಲಿಸುವ ಸಂಸ್ಥೆಗಳನ್ನು ಪರಿಶೀಲಿಸಬೇಕು. ಧರ್ಮಾಂಧತೆ ಸಹಿಸುವುದಿಲ್ಲ’ ಎಂದು ಹೇಳಿದರು.
ಇನ್ನು ಇದೇ ವೇಳೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿ, ತಪ್ಪುದಾರಿಗೆಳೆಯುವ, ಸಂವೇದನಾರಹಿತ, ಆಮೂಲಾಗ್ರ ಕಾಮೆಂಟ್‌ಗಳನ್ನು ಬರೆಯುವವರನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಮುಖ್ಯ ಕಾರ್ಯದರ್ಶಿ ಇಕ್ಬಾಲ್ ಸಿಂಗ್ ಬೈಸ್, ಪೊಲೀಸ್ ಮಹಾನಿರ್ದೇಶಕ ಸುಧೀರ್ ಸಕ್ಸೇನಾ ಮೊದಲಾದವರು ಉಪಸ್ಥಿತರಿದ್ದರು.
ಮೂಲಭೂತವಾದವನ್ನು ಕಲಿಸುತ್ತಿರುವ ಅಕ್ರಮ ಮದರಸಾಗಳು ಮತ್ತು ಸಂಸ್ಥೆಗಳನ್ನು ಪರಿಶೀಲಿಸಲಾಗುವುದು ಎಂದು ಸಿಎಂ ಟ್ವೀಟ್ ನಲ್ಲೂ ತಿಳಿಸಿದ್ದಾರೆ.
30 ನಿಮಿಷಗಳ ಕಾಲ ನಡೆದ ವರ್ಚುವಲ್ ಸಭೆಯಲ್ಲಿ ಚೌಹಾಣ್ ಅವರು ಸಾಮಾಜಿಕ ಮಾಧ್ಯಮಗಳ ಮೇಲೂ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.