ಕೇರಳ;ವಡಕ್ಕಂಚೇರಿ ಲೈಫ್ ಮಿಷನ್ ವಸತಿ ಸಂಕೀರ್ಣ ಹಗರಣದಲ್ಲಿ ವಿದೇಶಿ ಕೊಡುಗೆ (ನಿಯಮಾವಳಿ) ಕಾಯಿದೆಯ ಉಲ್ಲಂಘನೆಯ ಆರೋಪದ ತನಿಖೆಗೆ ಸಂಬಂಧಿಸಿದಂತೆ ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಎಂ.ಎ. ಯೂಸುಫ್ ಅಲಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಕರೆದಿದೆ.
ಕೇರಳ ನಿವಾಸಿ ಯುಎಇ ಮೂಲದ ಬಿಲಿಯನೇರ್ ಅವರನ್ನು ಮಾರ್ಚ್ 16 ರಂದು ಇಡಿ ವಿಚಾರಣೆಗೆ ಕರೆದಿದೆ. ಇಡಿ ಮೂಲಗಳ ಪ್ರಕಾರ, ಈ ಹಿಂದೆ ಅಲಿ ಅವರನ್ನು ಮಾರ್ಚ್ 1 ರಂದು ವಿಚಾರಣೆಗೆ ಕರೆಯಲಾಗಿತ್ತು ಆದರೆ ಇಡಿ ವಿಚಾರಣೆಗೆ ಅವರು ಹಾಜರಾಗಿಲ್ಲ.
ಯೂಸುಫ್ ಅಲಿ ಅವರ ಲುಲು ಗ್ರೂಪ್ ವಿಶ್ವಾದ್ಯಂತ ಲುಲು ಹೈಪರ್‌ಮಾರ್ಕೆಟ್ ಮತ್ತು ಲುಲು ಶಾಪಿಂಗ್ ಮಾಲ್‌ಗಳನ್ನು ಹೊಂದಿದೆ.
ಇಡಿ ಯೂಸುಫ್ ಅಲಿ 300 ಕೋಟಿಗಳಷ್ಟು ಹಣ ವರ್ಗಾವಣೆ ಮಾಡಿರುವುದಾಗಿ ಆರೋಪಿಸಿದೆ. ಯುನೈಟೆಡ್ ಅರಬ್’ನಲ್ಲಿದ್ದುಕೊಂಡು ಖಾಸಗಿ ಸಂಸ್ಥೆಗಳ ಮೂಲಕ ಕೇರಳ ಸರಕಾರದೊಂದಿಗೆ ಜಂಟಿ ಯೋಜನೆಯಾಗಿ ಲೈಫ್ ಮಿಶನ್ ಎಂಬ ಜನ ಮನೆ ನಿರ್ಮಾಣದಲ್ಲಿ ಅಲಿ ಅಕ್ರಮ ಎಸಗಿದ್ದಾರೆ ಎಂದು ಇ.ಡಿ.ಹೇಳಿದೆ.
ಲೈಫ್ ಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಶನಿವಾರ ಇಡಿ ಬಂಧಿಸಿದ್ದು, ನಂತರ ಅವರನ್ನು ಕೊಚ್ಚಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.