ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಮಾಜಿ ಸಂಸದರ ಪುತ್ರ ಸಾವು

ಉತ್ತರಪ್ರದೇಶದ ಲಕ್ನೋದಲ್ಲಿನ ಆಸ್ಪತ್ರೆಯಲ್ಲಿ ಬಿಜೆಪಿಯ ಮಾಜಿ ಸಂಸದರೋರ್ವರ ಪುತ್ರನಿಗೆ ಬೆಡ್‌ ಖಾಲಿ ಇಲ್ಲ ಎಂದು ಆಸ್ಪತ್ರೆಯ ವೈದ್ಯರು ದಾಖಲಿಸಲು ನಿರಾಕರಿಸಿದ್ದು, ಗಂಭೀರವಸ್ಥೆಯಲ್ಲಿದ್ದ ಅವರು ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.

ಸಂಜಯ್‌ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪುತ್ರ ನಿಧನರಾದ ಬಳಿಕ ಬಂಡಾ ಕ್ಷೇತ್ರದ ಮಾಜಿ ಸಂಸದ ಭೈರೋನ್‌ ಪ್ರಸಾದ್‌ ಮಿಶ್ರಾ ಅವರು ಆಸ್ಪತ್ರೆಯಲ್ಲಿ ಧರಣಿ ಕುಳಿತಿದ್ದರು. ಯಾವುದೇ ತುರ್ತು ಹಾಸಿಗೆಗಳು ಲಭ್ಯವಿಲ್ಲ ಎಂದು ಕರ್ತವ್ಯ ನಿರತ ಅಧಿಕಾರಿಗಳು ಹೇಳಿ ಸಂಸದರ ಮಗ ಪ್ರಕಾಶ್ ಮಿಶ್ರಾಗೆ ದಾಖಲಿಸಲು ನಿರಾಕರಿಸಿದ ಕಾರಣ ಅವರ ಸಾವು ಸಂಭವಿಸಿದೆ.

ಮಾಜಿ ಸಂಸದರು ತಮ್ಮ ಮಗ 40 ವರ್ಷದ ಪ್ರಕಾಶ್ ಮಿಶ್ರಾ ಅವರನ್ನು ಶನಿವಾರ ರಾತ್ರಿ 11 ಗಂಟೆಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಅವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ

ಹಿರಿಯ ಅಧಿಕಾರಿಗಳು ಬಂದು ಅವರನ್ನು ಭೇಟಿಯಾದ ಬಳಿಕ ಭೈರೋನ್ ಪ್ರಸಾದ್ ಅವರು ಬೆಳಿಗ್ಗೆ 4 ಗಂಟೆಗೆ ಧರಣಿಯನ್ನು ಕೊನೆಗೊಳಿಸಿದ್ದಾರೆ.

ಭೈರೋನ್ ಪ್ರಸಾದ್ ಅವರು 2014 ಮತ್ತು 2019ರ ನಡುವೆ ಬಂಡಾ ಕ್ಷೇತ್ರದ ಸಂಸದರಾಗಿದ್ದರು.

ಸೋಮವಾರ ಲಕ್ನೋ ಜಿಲ್ಲಾಡಳಿತವು ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಸೂಚಿಸಿದೆ. ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಸಂಬಂಧಪಟ್ಟ ವೈದ್ಯರನ್ನು ಸಂಸ್ಥೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಪಿಜಿಐ ನಿರ್ದೇಶಕರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದಾರೆ.

ಸರ್ಕಾರದ ತನಿಖೆಗೆ ಆದೇಶ ನೀಡುವ ಮೊದಲು ಪಿಜಿಐ ನಿರ್ದೇಶಕ ಪ್ರೊಫೆಸರ್ ಆರ್.ಕೆ. ಧೀಮನ್ ತನಿಖೆಗೆ ಆದೇಶಿಸಿದ್ದರು ಎಂದು ವರದಿ ತಿಳಿಸಿದೆ.

ಈ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ ಬಿಜೆಪಿ ನೇತೃತ್ವದ ಯುಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯ ಮಾಜಿ ಸಂಸದರೊಬ್ಬರ ಮಗನಿಗೂ ಚಿಕಿತ್ಸೆ ಸಿಗುತ್ತಿಲ್ಲ ಎಂದಾದರೆ ಜನಸಾಮಾನ್ಯರ ಬಗ್ಗೆ ಏನು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.

ಹೊರ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಮುಗಿದ ಬಳಿಕ ಉತ್ತರಪ್ರದೇಶದ ಬಿಜೆಪಿ ಮಂತ್ರಿಗಳು ಇದನ್ನು ಅರಿಯುತ್ತಾರೆ, ಏಕೆಂದರೆ ಈಗ ಚುನಾವಣೆಗಳು ನಡೆಯುತ್ತಿದೆ ಅವರಿಗೆ ಚುನಾವಣೆ ಯಾರದ್ದೋ ಜೀವನಕ್ಕಿಂತ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್