ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ 3 ಮಸೂದೆಗಳು ಲೋಕಸಭೆಯಲ್ಲಿ ಅಂಗೀಕಾರ; ಪ್ರತಿಪಕ್ಷದ ಸಂಸದರ ಅಮಾನತಿನ ನಡುವೆ ಬೆಳವಣಿಗೆ

ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳನ್ನು ಲೋಕಸಭೆ ಬುಧವಾರ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.

ಭಾರತೀಯ ನ್ಯಾಯ (ಎರಡನೇ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ ಮತ್ತು ಭಾರತೀಯ ಸಾಕ್ಷಿ (ಎರಡನೇ) ಮಸೂದೆಯನ್ನು ಕಳೆದ ವಾರ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದರು. ಈ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ-1860, ಕ್ರಿಮಿನಲ್ ಪ್ರೊಸೀಜರ್ ಆಕ್ಟ್-1898 ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯಿದೆಗೆ ಬದಲಾವಣೆಗಳನ್ನು ಸೂಚಿಸುತ್ತದೆ.

ಬುಧವಾರ ಲೋಕಸಭೆಯಲ್ಲಿ ಮಸೂದೆಗಳ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅಮಿತ್‌ ಶಾ, ಪ್ರಸ್ತಾವಿತ ಕಾನೂನುಗಳನ್ನು ಸಮಗ್ರ ಸಮಾಲೋಚನೆಯ ನಂತರ ರಚಿಸಲಾಗಿದೆ ಮತ್ತು ಸದನದ ಅನುಮೋದನೆಗೆ ತರುವ ಮೊದಲು ಕರಡು ಶಾಸನಗಳ ಕೂಲಂಕುಷವಾಗಿ ಪರಿಶೀಲಿಸಲಾಗಿದೆ ಎಂದು ಹೇಳಿದರು. ಅಸ್ತಿತ್ವದಲ್ಲಿರುವ ಕ್ರಿಮಿನಲ್ ಕಾನೂನುಗಳು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಮತ್ತು ಶಿಕ್ಷಿಸುವ ಉದ್ದೇಶವನ್ನು ಹೊಂದಿದೆ ನ್ಯಾಯವನ್ನು ನೀಡುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಮೂರು ಹೊಸ ಮಸೂದೆಗಳು ಭಾರತೀಯ ಚಿಂತನೆಯ ಆಧಾರದ ಮೇಲೆ ನ್ಯಾಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತವೆ. ಮೂರು ಪ್ರಸ್ತಾವಿತ ಕ್ರಿಮಿನಲ್ ಕಾನೂನುಗಳು ಜನರನ್ನು ವಸಾಹತುಶಾಹಿ ಮನಸ್ಥಿತಿಯಿಂದ  ಮುಕ್ತಗೊಳಿಸುತ್ತವೆ ಎಂದು ಲೋಕಸಭೆಯು ಧ್ವನಿ ಮತದ ಮೂಲಕ ಮಸೂದೆಗಳನ್ನು ಅಂಗೀಕರಿಸುವ ಮೊದಲು ಶಾ ಹೇಳಿದರು.

ಲೋಕಸಭೆ ಮತ್ತು ರಾಜ್ಯಸಭೆಯಿಂದ ವಿರೋಧ ಪಕ್ಷದ ಸಂಸದರನ್ನು ಸಾಮೂಹಿಕವಾಗಿ ಅಮಾನತುಗೊಳಿಸಿದ ನಡುವೆ ಈ ಬೆಳವಣಿಗೆಯಾಗಿದೆ.

ಟಾಪ್ ನ್ಯೂಸ್