ಕೊಚ್ಚಿಯಲ್ಲಿ ಕಾಲ್ತುಳಿತ ಪ್ರಕರಣ; ನಾಲ್ವರು ವಿದ್ಯಾರ್ಥಿಗಳು ಸಾವು, ಕೆಲ ಗಾಯಾಳುಗಳ ಸ್ಥಿತಿ ಗಂಭೀರ

ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (CUSAT )ನಲ್ಲಿ ಶನಿವಾರ ನಡೆದ ಓಪನ್ ಏರ್ ‘ಟೆಕ್‌ ಫೆಸ್ಟ್‌’ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳ ಸಾವು ಮತ್ತು 64 ಮಂದಿಗೆ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ತಜ್ಞರ ಸಮಿತಿ ರಚನೆ ಮಾಡುವುದಾಗಿ ಸಚಿವೆ ಆರ್.ಬಿಂದು ಹೇಳಿದ್ದಾರೆ.

ಕೇರಳದ ಉನ್ನತ ಶಿಕ್ಷಣ ಸಚಿವರಾದ ಆರ್.ಬಿಂದು ಈ ಕುರಿತು ಮಾತನಾಡಿದ್ದು, ಕೇರಳ ಸರ್ಕಾರವು ಘಟನೆಯ ತನಿಖೆಗಾಗಿ ಸಮಿತಿಯನ್ನು ರಚಿಸಲು ತೀರ್ಮಾನಿಸಿದೆ. ಮೂವರು ಸದಸ್ಯರ ಸಮಿತಿಯಲ್ಲಿ ತಾಂತ್ರಿಕ ತಜ್ಞರನ್ನು ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಶನಿವಾರ ಸಂಜೆ ಕಾಲ್ತುಳಿತದಲ್ಲಿ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಇನ್ನು ಕೂಡ ಚಿಂತಾಜನಕವಾಗಿದೆ. ಸುಮಾರು 40 ವಿದ್ಯಾರ್ಥಿಗಳು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆಯ ನಂತರ ಮನೆಗಳಿಗೆ ವಾಪಾಸ್ಸಾಗಿದ್ದಾರೆ. CUSAT ವಿವಿಯ ಮೂವರು ವಿದ್ಯಾರ್ಥಿಗಳ ಮೃತದೇಹಗಳನ್ನು ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಮೃತದೇಹಗಳನ್ನು ಊರಿಗೆ ರವಾನಿಸಲಾಗಿದೆ.

ಮೃತರನ್ನು ಅತುಲ್ ತಂಬಿ, ಆನ್ ರುಫ್ತಾ, ಸಾರಾ ಥಾಮಸ್ ಮತ್ತು ಅಲ್ವಿನ್ ಜೋಸೆಫ್ ಎಂದು ಗುರುತಿಸಲಾಗಿದೆ. ಅಲ್ವಿನ್ ಹೊರತುಪಡಿಸಿ ಉಳಿದ ಮೂವರು CUSAT ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರು.

ಟಾಪ್ ನ್ಯೂಸ್