ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟ ಕಿರಿಕ್ ಕೀರ್ತಿ ಅವರು ಜಗತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದರು ಎಂದು ಹೇಳಿಕೊಂಡ ಪೋಸ್ಟ್ ವೊಂದು ವೈರಲ್ ಆಗಿದೆ.
ಕೀರ್ತಿ ತನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಖಿನ್ನತೆಗೆ ಒಳಗಾಗಿದ್ದೆ ಎಂದಿದ್ದಾರೆ. ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ತುಂಬಾ ತೊಂದರೆಗೊಳಿಸಿದೆ ಎಂದು ಅವರು ಹೇಳಿದರು. ಕಿರಿಕ್ ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ನಾನೊಂದು ನಿರ್ಧಾರ ಮಾಡಿದ್ದೆ. ನಾನು ಜಗತ್ತಿಗೆ ವಿದಾಯ ಹೇಳಬೇಕಾಗಿದೆ. ಕಾರಣಗಳು ಹಲವು. ನನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳು ಇನ್ನಿಲ್ಲದಂತೆ ನನ್ನನ್ನು ಖಿನ್ನಗೊಳಿಸಿದವು. ಜೀವನದ ಮೇಲೆ ಕೆಟ್ಟ ನಿರಾಸಕ್ತಿ ಬಂದಿತು. ಎಲ್ಲಾ ಪ್ರಯತ್ನಗಳು ವ್ಯರ್ಥವಾದವು. ಒಂದೆಡೆ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ಕಂಗಾಲಾಗಿಸಿದೆ. ಸ್ವಲ್ಪ ದಿನ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದೆ. ಆದರೆ ಈಗ ಎಲ್ಲದಕ್ಕೂ ಹೆದರುತ್ತಿದ್ದರೆ ನನ್ನನ್ನು ಈ ಸ್ಥಿತಿಗೆ ತಂದವರಿಗೆ ಹೇಗೆ ಉತ್ತರಿಸಲಿ..? ನನ್ನನ್ನು ನಂಬಿ ಹೂಡಿಕೆ ಮಾಡಿದವರಿಗೆ ನ್ಯಾಯ ಸಿಗುವುದು ಹೇಗೆ…? ನನ್ನ ಮಗನ ಭವಿಷ್ಯ ಕಟ್ಟುವುದು ಹೇಗೆ..? ಈ ಪ್ರಶ್ನೆಗಳು ಕಾಡಿದ್ದು, ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡಿದ್ದೇನೆ’ ಎಂದು ಹೇಳಿದ್ದಾರೆ.