ಕೇರಳ; ಬಾಲಕನಲ್ಲಿ ಕಂಡು ಬಂದ ಅಪರೂಪದ ಖಾಯಿಲೆ

ಆಲಪ್ಪುಝ: ಕೇರಳದ ಅಲಪ್ಪುಝ ಜಿಲ್ಲೆಯಲ್ಲಿ ಅಪರೂಪದ ಖಾಯಿಲೆಗೆ ಬಾಲಕ ಬಲಿಯಾಗಿದ್ದಾನೆ.

ಪಾನವಳ್ಳಿ ಪಂಚಾಯತ್‌ನ 15 ವರ್ಷದ ಬಾಲಕ ಈ ಅಪರೂಪದ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್
ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.

ಪಾನವಳ್ಳಿ ಪೂರ್ವ ಮೈತಾರದ ಅನಿಲ್ ಕುಮಾರ್ ಮತ್ತು ಶಾಲಿನಿ ದಂಪತಿಯ ಪುತ್ರ ಗುರುದತ್ (15) ಮೃತ ದುರ್ದೈವಿ. ಈ ಬಾಲಕ 10ನೇ ತರಗತಿ ಓದುತ್ತಿದ್ದ.

ಹೊಳೆಯಲ್ಲಿ ಸ್ನಾನ ಮಾಡಿದ ಬಳಿಕ ಬಾಲಕ ಅಸ್ವಸ್ಥಗೊಂಡಿರುವುದಾಗಿ ವರದಿಯಾಗಿದೆ. ಕೆಸರಿನ ಜಲಮೂಲಗಳಲ್ಲಿ ನೇಗ್ಲೇರಿಯಾ ಫೌಲೆರಿ ಕಂಡುಬರುತ್ತವೆ. ಮನುಷ್ಯರು ಧುಮುಕಿದಾಗ ಮೂಗಿನ ಮೂಲಕ ತಲೆಯನ್ನು ತಲುಪಿ, ಮೆದುಳಿನ ಸೋಂಕು ಉಂಟಾಗುತ್ತದೆ. ಜೊತೆಗೆ ಜೀವಕ್ಕೂ ಹಾನಿಯಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಪರಾವಲಂಬಿ ಸ್ವಭಾವವಿಲ್ಲದೇ ನೀರಿನಲ್ಲಿ ಮುಕ್ತವಾಗಿ ವಾಸಿಸುವ ಅಮೀಬಾ ವರ್ಗಕ್ಕೆ ಸೇರಿದ ರೋಗಕಾರಕಗಳು ಚರಂಡಿ ಅಥವಾ ಕೊಳಕು ನೀರಿನಲ್ಲಿ ಸ್ನಾನ ಮಾಡುವುದರಿಂದ ಮೂಗಿನ ತೆಳ್ಳಗಿನ ಚರ್ಮದ ಮೂಲಕ ಮಾನವ ದೇಹವನ್ನು ಪ್ರವೇಶಿಸುವ ಈ ಜೀವಿ ಮೆದುಳು ಜ್ವರವನ್ನು ಉಂಟು ಮಾಡುತ್ತದೆ. ಇದು ಮೆದುಳಿನ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ.

ಇದರ ಮುಖ್ಯ ಲಕ್ಷಣಗಳು ಜ್ವರ, ತಲೆನೋವು, ವಾಂತಿ ಮತ್ತು ಮೂರ್ಛೆ ರೋಗವಾಗಿದೆ. ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ನೈಗ್ಲೇರಿಯಾ ಫೌಲೆರಿಯಿಂದ ಉಂಟಾಗುವ ಅಪರೂಪದ ಮೆದುಳಿನ ಸೋಂಕು.ನೇಗ್ಲೇರಿಯಾ ಫೌಲೆರಿ ಒಂದು ಅಮೀಬಾ.

ಕಲುಷಿತ ನೀರಿಗೆ ಒಡ್ಡಿಕೊಂಡ 1 ರಿಂದ 2 ವಾರಗಳಲ್ಲಿ ರೋಗ ಲಕ್ಷಣಗಳು ಪ್ರಾರಂಭವಾಗುತ್ತವೆ. ಕೆಲವೊಮ್ಮೆ ಮೊದಲ ಲಕ್ಷಣವೆಂದರೆ ವಾಸನೆ ಅಥವಾ ರುಚಿಯಲ್ಲಿ ಬದಲಾವಣೆ. ನಂತರ, ತಲೆನೋವು, ವಾಕರಿಕೆ ಮತ್ತು ವಾಂತಿ ಅನುಭವಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಟಾಪ್ ನ್ಯೂಸ್