ಕೇರಳ;ಮೊದಲ ತೃತೀಯ ಲಿಂಗಿ ಬಾಡಿಬಿಲ್ಡರ್ ಪ್ರವೀಣ್ ನಾಥ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸ್ಪೋಟಕ ಬೆಳವಣಿಗೆ ನಡೆದಿದ್ದು, ಪ್ರವೀಣ್ ಮೇಲೆ ರಿಶಾನಾ ಆಯಿಷಾ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಪ್ರವೀಣ್ ಕುಟುಂಬ ಆರೋಪಿಸಿದೆ.
2021ರಲ್ಲಿ ತೃತೀಯ ಲಿಂಗಿ ವಿಭಾಗದಲ್ಲಿ ಮಿಸ್ಟರ್ ಕೇರಳ ಎಂದು ಹೆಸರಿಸಲ್ಪಟ್ಟ 26 ವರ್ಷದ ಟ್ರಾನ್ಸ್ ಯುವಕ ಪ್ರವೀಣ್ ಈ ವರ್ಷದ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಟ್ರಾನ್ಸ್ ಯುವತಿ ರಿಶಾನಾ ಅವರನ್ನು ವಿವಾಹವಾಗಿದ್ದರು.ಅವರ ಕುಟುಂಬವು ಮದುವೆಗೆ ಬೆಂಬಲ ನೀಡಿತು.ಈ ಜೋಡಿಯ ವಿವಾಹವು ಕೇರಳದಲ್ಲಿ ಭಾರೀ ಸದ್ದು ಮಾಡಿತ್ತು.
ಮೂರು ತಿಂಗಳ ದಾಂಪತ್ಯದ ಬಳಿಕ ಜೋಡಿಯ ಸಂಬಂಧ ಅಳಸಿದೆ ಎಂದು ಸುದ್ದಿಯಾಗಿತ್ತು.ಇದರ ಬೆನ್ನಲ್ಲೇ ಪ್ರವೀಣ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪ್ರವೀಣ್ ಸಾವಿನ ನಂತರ ರಿಶಾನಾ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಶುಕ್ರವಾರ ಮುಂಜಾನೆ ಅವರನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಬಿಡುಗಡೆ ಮಾಡಲಾಗಿದೆ.
ಇದೀಗ ರಿಶಾನಾ ಪ್ರವೀಣ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದಳು ಎಂದು ಪ್ರವೀಣ್ ಸಹೋದರ ಪುಷ್ಪನ್ ಆರೋಪಿಸಿದ್ದಾರೆ.ಪ್ರವೀಣ್ ನಾಲ್ಕು ದಿನಗಳ ಹಿಂದೆ ನಮ್ಮನ್ನು ಭೇಟಿ ಮಾಡಿದ್ದರು.ಅವನ ಕುತ್ತಿಗೆ ಮತ್ತು ಹಣೆಯ ಮೇಲೆ ಗಾಯಗಳಿದ್ದವು.ನನ್ನ ಸೋದರಸಂಬಂಧಿ ಕೇಳಿದಾಗ, ಅವರು ರಿಶಾನಾ ಅವರ ದೈಹಿಕ ದೌರ್ಜನ್ಯ ನೀಡುವುದನ್ನು ಹೇಳಿದ್ದಾರೆ. ತನ್ನ ದೇಹದಾರ್ಢ್ಯ ವೃತ್ತಿಯನ್ನು ನಾಶಪಡಿಸುವುದಾಗಿ ಅವಳು ಬೆದರಿಕೆ ಹಾಕಿದ್ದಳು ಎಂದು ಸಹೋದರನ ಬಳಿ ಪ್ರವೀಣ್ ಹೇಳಿದ್ದರು ಎಂದು ಆರೋಪಿಸಲಾಗಿದೆ.
ಪ್ರವೀಣ್ ಅವರ ಅಂತ್ಯಕ್ರಿಯೆ ಶುಕ್ರವಾರ ಪಾಲಕ್ಕಾಡ್ನ ನೆನ್ಮಾರಾದ ಅವರ ಸ್ವಗ್ರಾಮದಲ್ಲಿ ನಡೆಯಿತು. ಇದಕ್ಕೂ ಮುನ್ನ ಅವರ ಪಾರ್ಥಿವ ಶರೀರವನ್ನು ತ್ರಿಶೂರಿನ ಒಳಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ರಿಶಾನಾ ನೆನ್ಮಾರಾಗೆ ತೆರಳಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.