ಕೇರಳ ಪೊಲೀಸರು ವಶಕ್ಕೆ ಪಡೆದ ಕರ್ನಾಟಕದ ನಾಲ್ವರು ಪೊಲೀಸರ ಬಿಡುಗಡೆ; ಏನಿದು ಪ್ರಕರಣ ಗೊತ್ತಾ?

ಬೆಂಗಳೂರು: ಸೈಬರ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಲಂಚಕ್ಕೆ ಬೇಡಿಕೆ ಆರೋಪದಲ್ಲಿ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರನ್ನು ಕೇರಳ ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದಾರೆ.

ಬೆಂಗಳೂರಿನ ವೈಟ್‍ಫೀಲ್ಡ್ ವಿಭಾಗದ ಇನ್ಸ್ ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ ಟೇಬಲ್‍ಗಳಾದ ವಿಜಯ್‍ಕುಮಾರ್, ಶಿವನಿ ಹಾಗೂ ಕಾನ್ಸ್ ಟೇಬಲ್ ಸಂದೇಶ್ ಎಂಬುವರನ್ನು ಕಳಂಚೇರಿ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನೋಟಿಸ್ ನೀಡಿ ಬಿಡುಗಡೆಗೊಳಿಸಿದ್ದಾರೆ

ಆರೋಪಿಗಳಿಂದ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಇವರ ಮೇಲಿತ್ತು.ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರಿಗೆ ಉದ್ಯೋಗ ಕೊಡಿಸುವುದಾಗಿ ವಂಚನೆ ಆಗಿತ್ತು. ಹೀಗಾಗಿ ವಂಚನೆಗೊಳಗಾದ ಚಂದಕ್ ಶ್ರೀಕಾಂತ್ ಎಂಬುವವರು ದೂರು ಕೊಟ್ಟಿದ್ದರು. ಚಂದಕ್‌ ಶ್ರೀಕಾಂತ್‌ಗೆ ದುಷ್ಕರ್ಮಿಗಳು ಆನ್‌ಲೈನ್ ಮೂಲಕ 26 ಲಕ್ಷ ರೂ.ವಂಚನೆ ಮಾಡಿದ್ದರು.

ಈ ಕುರಿತ ತನಿಖೆಯ ವೇಳೆ ಮಡಿಕೇರಿಯ ಐಸಾಕ್ ಎಂಬಾತ ಐಸಿಐಸಿಐ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಜತೆಗೆ, ರಾಜೇಶ್ ಒತ್ತಾಯದಿಂದಾಗಿ ಕೇರಳದ ಪರೇಸ್ ಮತ್ತು ನಿಶಾಂತ್‍ಗೆ ಹಣ ವರ್ಗಾವಣೆ ಮಾಡಿದ ಬಗ್ಗೆ ಐಸಾಕ್ ಹೇಳಿದ್ದಾನೆ. ಈ ಹೇಳಿಕೆ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಕೇರಳದ ಮನ್ನಾಪುರಂನ ನೌಶಾದ್ ಎಂಬಾತನೇ ಮೂಲ ಕಾರಣ ಎಂದು ಆರೋಪಿಗಳು ಹೇಳಿದ್ದರು.

ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ತೆರಳಿದ್ದರು. ಈ ವೇಳೆ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್ 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಲಾಗಿದೆ.

ಈ ದೂರಿನನ್ವಯ ಕಲ್ಲಂಚೇರಿ ಪೊಲೀಸರು ಇನ್‌ಸ್ಪೆಕ್ಟರ್‌ ಶಿವಪ್ರಕಾಶ್‌ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬಳಿಕ ನೊಟೀಸ್ ನೀಡಿ ಬಿಡುಗಡೆಗೊಳಿಸಿದ್ದಾರೆ.

ಟಾಪ್ ನ್ಯೂಸ್