ಕೇರಳ;ಮಾಧ್ಯಮಗಳೊಂದಿಗೆ ಮಾತನಾಡುವಾಗ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಆರೋಪ ಬಿಜೆಪಿಯ ಮಾಜಿ ಸಂಸದ, ನಟ ಸುರೇಶ್ ಗೋಪಿ ವಿರುದ್ಧ ಕೇಳಿ ಬಂದಿದ್ದು, ಈ ಬಗ್ಗೆ ಅವರು ಕ್ಷಮೆಯಾಚಿಸಿದ್ದಾರೆ.
ಬಿಜೆಪಿಯ ಮಾಜಿ ರಾಜ್ಯಸಭಾ ಸಂಸದ ಸುರೇಶ್ ಗೋಪಿ ಈ ಕುರಿತು ಪೋಸ್ಟ್ ಮಾಡಿದ್ದು, ವೇದಿಕೆ ಮೇಲಿರಲಿ ಅಥವಾ ಹೊರಗೆ ಇರಲಿ ಯಾರಿಗೂ ಅಗೌರವ ತೋರಿಸಿಲ್ಲ. ನನ್ನ ನಡವಳಿಕೆಯಿಂದ ಮಾನಸಿಕವಾಗಿ ನೋವಾಗಿದ್ದರೆ ನಾನು ಅವರ ಬಳಿ ಕ್ಷಮೆಯಾಚಿಸುತ್ತೇನೆ, ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾರೆ.
ಸುರೇಶ್ ಗೋಪಿ ಅವರು ಯಾವುದೇ ಕೆಟ್ಟ ಉದ್ದೇಶವನ್ನು ಹೊಂದಿಲ್ಲ ಮತ್ತು ವರದಿಗಾರ್ತಿಯನ್ನು ಮಗಳಿದ್ದಂತೆ ಎಂದು ಹೇಳಿದರು. ನಾನು ಅನುಚಿತವಾಗಿ ಸ್ಪರ್ಶಿಸಿದ್ದೇನೆ ಎಂದು ಅವರು ಭಾವಿಸಿದ್ದರೆ ನಾನು ತಂದೆಯಂತೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಸುದ್ದಿಗಾರರೊಂದಿಗೆ ಮಾತನಾಡಿದ ನಂತರ ಆವರಣದಿಂದ ಹೊರಹೋಗುತ್ತಿದ್ದೆ. ನನಗೆ ಯಾವುದೇ ತಪ್ಪು ಮಾಡುವ ಉದ್ದೇಶವಿರಲಿಲ್ಲ. ನಾನು ದೂರವಾಣಿ ಮೂಲಕ ವರದಿಗಾರ್ತಿಯನ್ನು ಕ್ಷಮೆಯಾಚಿಸಲು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಅವರು ಕರೆ ಸ್ವೀಕರಿಸಲಿಲ್ಲ. ಈಗ ಅವರು ನನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದರೆ, ನಾನೇನು ಮಾಡಬೇಕು? ನನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಮತ್ತು ನಾನು ತಂದೆಯಂತೆ ವರ್ತಿಸಿದ್ದೇನೆ ಎಂದು ಅವರು ಹೇಳಿದರು.
ಕೇರಳದ ಕಾರ್ಯನಿರತ ಪತ್ರಕರ್ತರ ಸಂಘವು ನಟನ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಮಹಿಳಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದೇವೆ ಎಂದು ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷೆ ಎಂ.ವಿ.ವಿನೀತಾ ಹಾಗೂ ಪ್ರಧಾನ ಕಾರ್ಯದರ್ಶಿ ಆರ್.ಕಿರಣ್ ಬಾಬು ತಿಳಿಸಿದ್ದಾರೆ.
ಶುಕ್ರವಾರ ಉತ್ತರ ಕೋಯಿಕ್ಕೋಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ವೇಳೆ ಸುರೇಶ್ ಗೋಪಿ ಅವರು ಮಹಿಳಾ ಪತ್ರಕರ್ತೆಯನ್ನು ಅವರ ಭುಜ ಹಿಡಿದು ಎರಡೆರಡು ಭಾರಿ ತಳ್ಳುತ್ತಿರುವ ದೃಶ್ಯ ಸೆರೆಯಾಗಿತ್ತು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.