ಸುಡಾನ್‌ನಲ್ಲಿ ಮಿಲಿಟರಿ ಮತ್ತು ಪ್ರಬಲ ಅರೆಸೈನಿಕ ಪಡೆಗಳ ನಡುವಿನ ಸಂಘರ್ಷದಿಂದ ಸುಡಾನ್‌ನ ಎಲ್-ಫಾಷರ್ ನಗರದಲ್ಲಿ ಕರ್ನಾಟಕದ ಕನಿಷ್ಠ 31 ಮಂದಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿ ನಿವಾಸಿ ಎಸ್ ಪ್ರಭು ಅವರು ತಮ್ಮ ಮನೆಯಿಂದ ಹೊರಗೆ ಕಾಲಿಟ್ಟು ನಾಲ್ಕೈದು ದಿನಗಳಾಗಿವೆ ಮತ್ತು ಅವರ ನೆರೆಹೊರೆಯಲ್ಲಿ ಆಗಾಗ್ಗೆ ಬಾಂಬ್ ದಾಳಿ ಮತ್ತು ಶೆಲ್ ದಾಳಿಗಳು ಕೇಳಿ ಬರುತ್ತಿದೆ ಎಂದು ಹೇಳಿರುವ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಊಟ, ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಬಾಡಿಗೆ ಮನೆಯೊಳಗೆ ಸಿಲುಕಿದ್ದೇವೆ.ಗುಂಡಿನ ಸದ್ದು ಮತ್ತು ಶೆಲ್‌ಗಳ ಸದ್ದು ಕೇಳಿಸುತ್ತದೆ.ನಮ್ಮ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ ಮತ್ತು ನಾವು ಭಾರತಕ್ಕೆ ಹೇಗೆ ಹಿಂತಿರುಗುತ್ತೇವೆ ಎಂದು ನಮಗೆ ಖಚಿತವಿಲ್ಲ ಎಂದು ಅವರು ಹೇಳಿದರು.
ಮೂರು ದಿನಗಳಿಂದ ನಮಗೆ ಊಟವಿಲ್ಲ.ವಸತಿ ಸಮುಚ್ಚಯದಲ್ಲಿ ನೀರಿನ ತೊಟ್ಟಿ ಇದ್ದು ಬತ್ತಿ ಹೋಗಲಾರಂಭಿಸಿದೆ.ನಾವು ಸ್ನಾನ ಮಾಡಿಲ್ಲ, ಕುಡಿಯಲು ಬಿಟ್ಟರೆ ಬೇರೆ ಉದ್ದೇಶಕ್ಕೆ ನೀರು ಬಳಸಿಲ್ಲ. ಕ್ರಾಸ್ ಫೈರ್ ವೇಳೆ ಕಾಂಪ್ಲೆಕ್ಸ್ ನಲ್ಲಿರುವ ಮನೆಯೊಂದರ ಗೋಡೆಗೆ ಪೆಟ್ಟು ಬಿದ್ದಿದೆ ಎಂದು ಹೇಳಿದರು.
ಸಿಕ್ಕಿಬಿದ್ದವರಲ್ಲಿ ಐವರು ಚನ್ನಗಿರಿ, ಏಳು ಮಂದಿ ಶಿವಮೊಗ್ಗ ಮತ್ತು 19 ಮಂದಿ ಮೈಸೂರಿನ ಹುಣಸೂರು ತಾಲೂಕಿನವರು ಎಂದು ಪ್ರಭು ತಿಳಿಸಿದ್ದಾರೆ.
ಸೂಡಾನ್ ನ ಮಿಲಿಟರಿ ಮತ್ತು ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ನಡುವೆ ಉಂಟಾದ ಸಂಘರ್ಷದಲ್ಲಿ ಇದುವರೆಗೆ ಕನಿಷ್ಠ 180 ಮಂದಿ ಮೃತಪಟ್ಟಿದ್ದು 1,800ಕ್ಕೂ ಹೆಚ್ಚು ಮಂದಿ ನಾಗರಿಕರು ಮತ್ತು ಹೋರಾಟಗಾರರು ಗಾಯಗೊಂಡಿದ್ದಾರೆ ಎಂದು ಸೂಡಾನ್ ನ ವಿಶ್ವಸಂಸ್ಥೆ ರಾಯಭಾರಿ ವೊಲ್ಕರ್ ಪರ್ತ್ಸ್ ತಿಳಿಸಿದ್ದಾರೆ.
ನ್ಯಾಯಾರ್ಕ್ ಟೈಮ್ಸ್ ವರದಿ ಪ್ರಕಾರ, ಸಂಘರ್ಷದಿಂದಾಗಿ ರಾಜಧಾನಿ ಖಾರ್ಟೂಮ್ ನಲ್ಲಿ 5 ಮಿಲಿಯನ್ ಗಿಂತಲೂ ಅಧಿಕ ಮಂದಿ ಮನೆಯಿಂದ ಹೊರಗೆ ಬರಲಾಗದೆ ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಇದು ಮುಸಲ್ಮಾನರ ಪವಿತ್ರ ತಿಂಗಳು ರಂಜಾನ್ ಆಗಿದ್ದರೂ ಕಳೆದ ಕೆಲವು ದಿನಗಳಿಂದ ಇಲ್ಲಿನ ನಿವಾಸಿಗಳಿಗೆ ವಿದ್ಯುತ್ ಮತ್ತು ನೀರಿನ ಪೂರೈಕೆ ಇಲ್ಲದೆ ದಿನನಿತ್ಯದ ಕೆಲಸಗಳಿಗೆ ಜನರಿಗೆ ಕಷ್ಟವಾಗುತ್ತಿದೆ ಎಂದು ವರದಿ ತಿಳಿಸಿದೆ.