ಸೌದಿ ಅರೇಬಿಯಾ; ಕಅಬಾದ ಮುಂದೆ ಭಾರತ್ ಜೋಡೋ ಯಾತ್ರೆಯ ಫಲಕ ಪ್ರದರ್ಶಿಸಿದ ಯುವಕ ಅರೆಸ್ಟ್

ಸೌದಿಅರೇಬಿಯಾ;ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಲು ಯುವ ಕಾಂಗ್ರೆಸ್ ಕಾರ್ಯಕರ್ತನೋರ್ವ ಕಅಬಾದ ಮುಂದೆ ಫಲಕವನ್ನು ಹಿಡಿದಿದ್ದಕ್ಕಾಗಿ ತೊಂದರೆಗೆ ಸಿಲುಕಿದ್ದಾರೆ.

ಮಧ್ಯಪ್ರದೇಶದ ಝಾನ್ಸಿ ಬಳಿಯ ನಿವಾರಿ ಜಿಲ್ಲೆಯ ನಿವಾಸಿ ರಜಾ ಕದ್ರಿ (26) ಎಂಬಾತನನ್ನು ಮಕ್ಕಾದಲ್ಲಿರುವ ಪವಿತ್ರ ಕಅಬಾದಲ್ಲಿ ಫಲಕ ಪ್ರದರ್ಶಿಸಿದ್ದಕ್ಕಾಗಿ ಬಂಧಿಸಲಾಗಿದೆ.

ಪವಿತ್ರ ಕಅಬಾದ ಮುಂದೆ ನಿಂತು ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುವ ಫಲಕವನ್ನು ಹಿಡಿದುಕೊಂಡು ಅವರು ಛಾಯಾಚಿತ್ರವನ್ನು ತೆಗೆದಿದ್ದರು. ಎರಡು ದಿನಗಳ ನಂತರ, ಭದ್ರತಾ ಪಡೆಗಳು ಮಧ್ಯಪ್ರದೇಶದ ಇತರ ಯಾತ್ರಾರ್ಥಿಗಳೊಂದಿಗೆ ಅವರು ತಂಗಿದ್ದ ಅವರ ಹೋಟೆಲ್‌ಗೆ ದಾಳಿ ನಡೆಸಿ ಅವರನ್ನು ವಶಕ್ಕೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಸೌದಿಯ ಇಸ್ಲಾಮಿಕ್ ಪವಿತ್ರ ಸ್ಥಳಗಳಲ್ಲಿ ಯಾವುದೇ ರೀತಿಯ ಧ್ವಜ ಮತ್ತು ಫಲಕವನ್ನು ಪ್ರದರ್ಶಿಸುವುದು ಕಾನೂನುಬಾಹಿರವಾಗಿದೆ. ಹರಮ್ ಪ್ರದೇಶದಲ್ಲಿ ಯಾವುದೇ ರೀತಿಯ ಧ್ವಜವನ್ನು ಪ್ರದರ್ಶಿಸದಂತೆ ಮತ್ತು ನೆಲದಲ್ಲಿ ಕಂಡುಬರುವ ವಸ್ತುಗಳನ್ನು ಆರಿಸದಂತೆ ಭಾರತೀಯ ದೂತಾವಾಸವು ದೇಶವಾಸಿಗಳಿಗೆ ಪದೇ ಪದೇ ಎಚ್ಚರಿಸಿತ್ತು.

ಇನ್ನು ಯಾವುದೇ ಧ್ವಜ ಅಥವಾ ಫಲಕವನ್ನು ಪ್ರದರ್ಶಿಸುವ ಪ್ರಕರಣಗಳು ಹೆಚ್ಚಾಗಿರುವುದರಿಂದ ಸ್ಥಳೀಯ ನಿಯಮಗಳನ್ನು ಪಾಲಿಸುವಂತೆ ರಾಜತಾಂತ್ರಿಕರು ಭಾರತೀಯರನ್ನು ಒತ್ತಾಯಿಸುತ್ತಿದ್ದಾರೆ.

ಟಾಪ್ ನ್ಯೂಸ್