ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಬಳಿಕ ದೇವೇಗೌಡರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಹೊಣೆ ನಾನು ಹೊರುತ್ತೇನೆ. ಹೀಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ. ದೇವೇಗೌಡರಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಹೊಸ ಸರ್ಕಾರ ರಚನೆಯಾಗಿದೆ ಶುಭವಾಗಲಿ. ಕಾಂಗ್ರೆಸ್‌ನಲ್ಲಿದ್ದರೆ ಮಂತ್ರಿಯಾಗುತ್ತಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿ, ಗೌರವ ಇಲ್ಲದ ಕಡೆ ಸ್ಥಾನಕ್ಕೆ ಹೋಗಲ್ಲ, ಮಾನಕ್ಕೆ ಹೋಗುತ್ತೇವೆ. ಯು.ಟಿ.ಖಾದರ್‌ನ ಡಿಸಿಎಂ ಮಾಡಬಹುದಿತ್ತಲ್ಲ. ಈಗ ಅವರು ಎದ್ದೇಳುವ ಹಾಗೂ ಇಲ್ಲ, ಮಾತನಾಡುವ ಹಾಗೂ ಇಲ್ಲ. ಯು.ಟಿ.ಖಾದರ್ ಸ್ಪೀಕರ್ ಮಾಡಿದ ಕಾಂಗ್ರೆಸ್ ನಡೆಗೆ ಟೀಕೆ ಮಾಡಿದರು.
ಬಿಜೆಪಿ ವಿರೋಧಿ ಅಲೆ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೂ ನಾವು ರಾಜ್ಯದಲ್ಲಿ 60 ಲಕ್ಷ ಮತ ಪಡೆದಿದ್ದೇವೆ. ಜಿಪಂ, ತಾಪಂ ಚುನಾವಣೆಗೆ ಸಜ್ಜಾಗಿ ಅಂತ ಕಾರ್ಯಕರ್ತರಿಗೆ ಹೇಳುತ್ತೇನೆ. ಈ ಸರ್ಕಾರದ ಮೂರು ತಿಂಗಳ ಹನಿಮೂನ್ ಪಿರ್ಯಾಡ್ ನೋಡುತ್ತೇವೆ. ನಮ್ಮಲ್ಲಿ ಮತ ಪರಿವರ್ತನೆಗಾಗಿ ಸಿದ್ದತೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದೇವೆ. ಕೊನೆಯ ನಾಲ್ಕು ದಿನದ ತಂತ್ರಗಾರಿಕೆಯಲ್ಲಿ ವಿಫಲವಾಗಿದ್ದೇವೆ ಎಂದು ಹೇಳಿದರು.