ಜ್ಞಾನವಾಪಿ ಮಸೀದಿ ಕುರಿತ ಸಮೀಕ್ಷೆ ವರದಿ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಕೆ

ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ನಡೆದಿದ್ದು, ಭಾರತೀಯ ಪುರಾತತ್ವ ಇಲಾಖೆಯು ಉತ್ತರಪ್ರದೇಶದ ವಾರಣಾಸಿಯ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿ ಕುರಿತ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಸಲ್ಲಿಸಿದೆ.

ಇಂದು ಮಧ್ಯಾಹ್ನ ವೈಜ್ಞಾನಿಕ ಸಮೀಕ್ಷೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ವರದಿಯನ್ನು ಬಹಿರಂಗಗೊಳಿಸಲಾಗುತ್ತದೆಯೇ? ಸರ್ವೆ ಮಾಹಿತಿಯನ್ನು ಹಿಂದೂ ಪರ ಮತ್ತು ಮುಸ್ಲಿಂ ಪರ ಅರ್ಜಿದಾರರ ಜೊತೆ ಹಂಚಿಕೊಳ್ಳಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿದೆ.

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸರ್ವೆ ಕಾರ್ಯ ಪೂರ್ಣಗೊಳಿಸಿರುವ ಭಾರತೀಯ ಪುರಾತತ್ವ ಇಲಾಖೆಯು, ತನ್ನ ವರದಿಯನ್ನು ವಿಚಾರಣೆ ನಡೆಯುತ್ತಿರುವ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಪ್ರಕರಣ ಮುಂದಿನ ವಿಚಾರಣೆ ಡಿ. 21ರಂದು ನಡೆಯಲಿದೆ.

ಹಿಂದೂ ಅರ್ಜಿದಾರರ ಪರ ವಕೀಲ ಮದನ್ ಮೋಹನ್ ಯಾದವ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಎಎಸ್‌ಐ ಸ್ಥಾಯಿ ಸಮಿತಿಯ ಅಮಿತ್ ಶ್ರೀವಾಸ್ತವ ಅವರು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ತಮ್ಮ ವರದಿಯನ್ನು ಸಲ್ಲಿಸಿದ್ದಾರೆ. ವರದಿ ಸಲ್ಲಿಸಿದ ಸಂದರ್ಭದಲ್ಲಿ ಎಎಸ್‌ಐನ ನಾಲ್ವರು ಹಿರಿಯ ಅಧಿಕಾರಿಗಳು ಇದ್ದರು. ಡಿ.21ರಂದು ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಲಕೋಟೆಯನ್ನು ತೆರೆದು ಎರಡೂ ಕಡೆಯವರಿಗೆ ಅದರ ಪ್ರತಿಯನ್ನು ನ್ಯಾಯಾಲಯ ನೀಡಲಿದೆ ಎಂದು ಯಾದವ್ ತಿಳಿಸಿದರು.

ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿ ದೇವಾಲಯದ ಮೂಲ ತಳಪಾಯದ ಮೇಲೆ 17ನೇ ಶತಮಾನದಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಪರ ಅರ್ಜಿದಾರರು ವಾದವನ್ನು ಮಂಡಿಸಿದ್ದರು.

ಟಾಪ್ ನ್ಯೂಸ್