ಜೈಶ್ರೀರಾಮ್ ಘೋಷಣೆ ಕೂಗುವಂತೆ ಆಗ್ರಹಿಸಿ ವೃದ್ಧನಿಗೆ ಹಲ್ಲೆ ಪ್ರಕರಣ; ಆರೋಪಿಗಳ ಬಂಧನ

ಕೊಪ್ಪಳದ ಗಂಗಾವತಿ ನಗರದಲ್ಲಿ ಅಂಧ ಮುಸ್ಲಿಂ ವೃದ್ಧನಿಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.

ಗಂಗಾವತಿಯ ಕುವೆಂಪು ಬಡಾವಣೆಯ ನಿವಾಸಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸಾಗರ ಶೆಟ್ಟಿ ಕಲ್ಕಿ ಹಾಗೂ ಕಲ್ಲಪ್ಪನ ಕ್ಯಾಂಪ್‌ನ ನರಸಪ್ಪ ದನಕಾಯರ ಬಂಧಿತ ಆರೋಪಿಗಳು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಇದುವರೆಗೆ ಈ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗಿದೆ. ವೃದ್ಧನಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಡ ಹೇರಲಾಗಿದೆ ಎನ್ನುವ ಆರೋಪಕ್ಕೆ ಯಾವುದೇ ಆಧಾರ ಲಭಿಸಿಲ್ಲ. ಹುಸೇನಸಾಬ್ ಗಡ್ಡಕ್ಕೆ ಬೆಂಕಿ ಹಚ್ಚಲಾಗಿತ್ತು ಎನ್ನುವುದಕ್ಕೂ ದಾಖಲೆ ಲಭಿಸಿಲ್ಲ ಎಂದು ಹೇಳಿದ್ದಾರೆ.

ಮೆಹಬೂಬ್ ನಗರದ ನಿವಾಸಿ ಹುಸೇನ್ ಸಾಬ್ ಹೊಸಪೇಟೆಯಿಂದ ನ.25ರಂದು ರಾತ್ರಿ ವೇಳೆ ಗಂಗಾವತಿಗೆ ವಾಪಸ್ ಆಗಿದ್ದರು. ಈ ವೇಳೆ ಬೈಕಿನಲ್ಲಿ ಇಬ್ಬರು ಬಂದಿದ್ದು, ಅವರಲ್ಲಿ ಡ್ರಾಪ್ ನೀಡುವಂತೆ ಕೇಳಿದ್ದಾರೆ. ಪಾನಮತ್ತರಾಗಿದ್ದ ಇಬ್ಬರು ಆರೋಪಿಗಳು ಬೈಕ್ ಮೇಲೆ ಹುಸೇನ್ ಸಾಬ್‌ರನ್ನು ಕೂರಿಸಿಕೊಂಡು ಹೋಗಿದ್ದಾರೆ. ಈ ವೇಳೆ ಮಧ್ಯದಲ್ಲಿ ಕುಳಿತಿದ್ದ ನರಸಪ್ಪ, ಹುಸೇನ್ ಸಾಬ್ ಅವರ ಟೋಪಿಯನ್ನು ಜಗ್ಗಿದ್ದಾನೆ. ಇದಕ್ಕೆ ಹುಸೇನ್ ಸಾಬ್ ಕೋಪಗೊಂಡಿದ್ದಾರೆ. ಇದೇ ಕಾರಣಕ್ಕೆ ಆರೋಪಿಗಳು ಹುಸೇನ್ ಸಾಬ್‌ರನ್ನು ರೈಲ್ವೆ ಸೇತುವೆ ಬಳಿ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.

ಟಾಪ್ ನ್ಯೂಸ್